ಹಾಸನ: ಜಿಲ್ಲೆಯಲ್ಲಿರುವ ಶ್ರವಣಬೆಳಗೊಳ ಕ್ಷೇತ್ರ ಇತಿಹಾಸ ಪ್ರಸಿದ್ಧವಾಗಿದ್ದು, ಪ್ರಪಂಚದ ಮೂಲೆ ಮೂಲೆಯಿಂದ ನಿತ್ಯ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇಲ್ಲಿರುವ ಬಾಹುಬಲಿ ಪ್ರತಿಮೆ ಸೇರಿದಂತೆ ಇನ್ನಿತರ ಐತಿಹಾಸಿಕ ಬಸದಿಗಳು ಪ್ರವಾಸಿಗರಲ್ಲಿ ಭಕ್ತಿಭಾವ ಮೂಡಿಸುತ್ತವೆ. ಆದರೆ, ಇದೇ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದೇ ಕಳೆದ ಏಳೆಂಟು ವರ್ಷಗಳಿಂದ ಸುಮಾರು ಮೂರು ಕೋಟಿಗೂ ಅಧಿಕ ವಿದ್ಯುತ್ ಬಿಲ್ ಬಾಕಿ ಉಳಿದಿದೆ.
ಶ್ರವಣಬೆಳಗೊಳಕ್ಕೆ ನಿತ್ಯ ಪ್ರವಾಸಿಗರು ಬರುತ್ತಿರುವುದರಿಂದ ಅವರೆಲ್ಲರಿಗೂ ಕುಡಿಯುವ ನೀರು ಪೂರೈಸಬೇಕು. ಅದಕ್ಕಾಗಿ ಹೇಮಾವತಿ ನದಿಯಿಂದ ನೀರು ತರಲಾಗಿದ್ದು, ಬೃಹತ್ ಯಂತ್ರಗಳು ಚಾಲನೆಯಲ್ಲಿರುತ್ತವೆ. ಅದರ ಜೊತೆಗೆ ಮಹಾ ಮಸ್ತಕಾಭಿಷೇಕ ಸೇರಿದಂತೆ ಇನ್ನಿತರ ವಿಶೇಷ ಸಂದರ್ಭದಲ್ಲಿ ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಈ ಎಲ್ಲ ಕಾರಣಗಳಿಂದ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಬರುತ್ತಿದೆ. ಆದರೆ, ಗ್ರಾಮ ಪಂಚಾಯಿತಿಗೆ ಬರುವ ಕಡಿಮೆ ಆದಾಯದಲ್ಲಿ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಶ್ರವಣಬೆಳಗೊಳಕ್ಕೆ ಎಲೆಕ್ಟ್ರಿಕ್ ಬಿಲ್ ಪಾವತಿ ಮಾಡಲು ಹೆಚ್ಚಿನ ಅನುದಾನ ನೀಡಬೇಕು ಎಂದು ಸ್ಥಳೀಯ ಶಾಸಕ ಬಾಲಕೃಷ್ಣ ಮನವಿ ಮಾಡಿದ್ದಾರೆ.