ಹಾಸನ: ಅಂತೂ ಇಂತೂ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವುದಕ್ಕೆ ಸ್ವಪಕ್ಷೀಯರೇ ಸಿದ್ಧರಾಗಿದ್ದಾರೆ ಎಂಬುದಕ್ಕೆ ಇಲ್ಲಿ ನಡೆದ ಬೆಳವಣಿಗೆ ಸಾಕ್ಷಿಯಾಗಿದೆ. ಜೆಡಿಎಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ 7 ಮಂದಿ ನಗರಸಭೆ ಸದಸ್ಯರು ಪ್ರತ್ಯೇಕ ಆಸನ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅರಸೀಕೆರೆ ನಗರಸಭೆಯ ಸದಸ್ಯರಾದ ಹರ್ಷವರ್ಧನ್, ಕಲೈಅರಸಿ, ಚಂದ್ರಶೇಖರಯ್ಯ, ಎನ್.ಕವಿತಾ ದೇವಿ, ದರ್ಶನ್ ಎ.ವಿ. ಬಿ.ಎನ್.ವಿದ್ಯಾಧರ್ ಮತ್ತು ಆಯಿಶಾ ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ, ಪಕ್ಷೇತರವಾಗಿ ಪುಟ್ಟರಾಜು ಮತ್ತು ಮೇಲಗಿರಿಗೌಡ ಬಿಜೆಪಿಗೆ ಸಾಥ್ ನೀಡಿದ್ದಾರೆ.
ಶಾಸಕ ಮತ್ತು ಮಾಜಿ ಅಧ್ಯಕ್ಷರ ವಿರುದ್ದ ಸೆಟೆದ ಸದಸ್ಯರು:ಅಭಿವೃದ್ಧಿಯ ಹರಿಕಾರ, ಬರದ ನಾಡಿನ ಭಗೀರಥ ಎಂದೆಲ್ಲಾ ಬಿಂಬಿತವಾಗಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಶಾಸಕ ಕೆಎಂ ಶಿವಲಿಂಗೇಗೌಡ ಹಾಗೂ ಮಾಜಿ ನಗರಸಭಾ ಅಧ್ಯಕ್ಷ ಸಮೀವುಲ್ಲಾ ವಿರುದ್ಧ ನೇರವಾಗಿ ಆರೋಪ ಮಾಡುತ್ತಿದ್ದು, ಇವರಿಬ್ಬರ ವಿರುದ್ಧ ಏಳು ಮಂದಿ ಜೆಡಿಎಸ್ ಸದಸ್ಯರು ಸೆಟೆದು ನಿಂತಿದ್ದಾರೆ.
ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಗೆ ಬೆಂಬಲ ಸೂಚಿಸುವ ಮೂಲಕ ಕೋಟೆಯನ್ನು ಛಿದ್ರ ಮಾಡಿದ್ದಾರೆ. ಅಲ್ಲದೇ ಪಕ್ಷೇತರವಾಗಿ ನಿಂತಿದ್ದ ಇಬ್ಬರು ಸದಸ್ಯರು ಕೂಡ ಬಿಜೆಪಿಗೆ ಬಾಹ್ಯ ಬೆಂಬಲ ಕೊಡುವ ಮೂಲಕ ಅರಸೀಕೆರೆಯಲ್ಲಿ ಕೇಸರಿ ಬಾವುಟವನ್ನು ಇಂದಿನಿಂದ ವಿರಾಜಮಾನವಾಗಿ ಹಾರಿಸಲು ಹೊರಟಿದ್ದಾರೆ.
ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ:ಜೆಡಿಎಸ್ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದ್ದು, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಮಾಜಿ ನಗರಸಭೆಯ ಅಧ್ಯಕ್ಷ ಸಮೀವುಲ್ಲಾ ವಿರುದ್ಧ ಏಳು ಮಂದಿ ಗಂಭೀರವಾಗಿ ಆರೋಪ ಮಾಡಿದ್ದಾರೆ. ಪಕ್ಷದಲ್ಲಿ ಯಾವುದೇ ಕಾಮಗಾರಿಗಳನ್ನು ನೀಡದೇ ದಬ್ಬಾಳಿಕೆ ನಡೆಸುತ್ತಿದ್ದರು.
ಹೀಗಾಗಿ ಪಕ್ಷವನ್ನು ಜೊತೆಗಿಟ್ಟುಕೊಂಡು ಅವರ ಇಬ್ಬರ ಧೋರಣೆಗಳನ್ನು ವಿರೋಧ ಮಾಡಿ ನಾವು ಬಾಹ್ಯವಾಗಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇವೆ ಎಂದಿದ್ದಾರೆ.
ನಡೆಯಿತು ಆಪರೇಷನ್ ಕಮಲ: ಇಂತಹ ಒಂದು ಬೆಳವಣಿಗೆ ನಡೆದಿದ್ದು ಕೇವಲ 9 ಗಂಟೆಯಲ್ಲಿ. ನಿನ್ನೆ ರಾತ್ರಿ ಒಂದು ದಿನ ನಡೆದ ಬೆಳವಣಿಗೆಯಲ್ಲಿ ಸುಮಾರು ಜೆಡಿಎಸ್ನ ಏಳು ಜನ ಸದಸ್ಯರನ್ನು ಬಿಜೆಪಿಗೆ ಕರೆತರುವ ಮೂಲಕ ಇಡೀ ಅರಸೀಕೆರೆಯ ಜೆಡಿಎಸ್ ಪಾಳಯಕ್ಕೆ ಶಾಕ್ ನೀಡಿದೆ.