ಹಾಸನ:ಕ್ಷೇತ್ರದಲ್ಲಿ ಬಿಜೆಪಿ ಒಂದು ಲಕ್ಷ ಮತ ಪಡೆಯುವುದು ನಿಶ್ಚಿತ. ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಎರಡನೇ ಸ್ಥಾನಕ್ಕಾಗಿ ಫೈಟ್ ಮಾಡಲಿ ಎಂದು ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಸವಾಲು ಹಾಕಿದರು.
ನಿನ್ನೆ ಹಾಸನ ಜನರು ನನ್ನ ಎದುರಾಳಿಗಳಿಗೆ ಸಂದೇಶ ಕೊಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿಯಿಂದ ಕೂಡ ಅಭ್ಯರ್ಥಿಗಳು ಇರುತ್ತಾರೆ. ಆದರೆ ಜೆಡಿಎಸ್ ನನ್ನ ನೈಜ ಎದುರಾಳಿ. ಉಳಿದ ಮೂರು ಪಕ್ಷಗಳು 2ನೇ ಸ್ಥಾನಕ್ಕೆ ಹೋರಾಟ ಮಾಡುತ್ತವೆ ಎಂದರು.
ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಸನ ಲೂಟಿಯಾಗಿದೆ ಎಂಬ ರೇವಣ್ಣನವರ ಹೇಳಿಕೆ ವಿಚಾರ ಕುರಿತು ಮಾತನಾಡಿ, ಹೌದು. ನಾನು ಕ್ಷೇತ್ರದ ಜನರ ಪ್ರೀತಿಯನ್ನು ಲೂಟಿ ಮಾಡಿದ್ದೇನೆ. ಜನರ ಪ್ರೀತಿ ಲೂಟಿ ಮಾಡಿದ್ದಕ್ಕೆ ನಿನ್ನೆ ಅಷ್ಟೊಂದು ಜನ ಸೇರಿದ್ದರು. ಸ್ವರೂಪ್ ಟಿಕೆಟ್ ಪಡೆಯುವುದಕ್ಕೆ ಎಷ್ಟೊಂದು ಪರದಾಡಿದರು. ಇನ್ನು ಅವರೇನು ಕೆಲಸ ಮಾಡುತ್ತಾರೆ ಎಂದು ಜನ ಯೋಚನೆ ಮಾಡುತ್ತಾರೆ. ಒಂದು ಪತ್ರ ಕೊಡುವುದಕ್ಕೂ ಹೊಳೆನರಸೀಪುರದ ಅನುಮತಿ ಬೇಕು. ಹಾಗಾಗಿ ಹಾಸನದ ಜನರು ಕೆಲಸಗಾರನಿಗೆ ಅವಕಾಶ ಕೊಡುತ್ತಾರೆ ಎಂದು ರೇವಣ್ಣಗೆ ಟಾಂಗ್ ನೀಡಿದ್ದಾರೆ.
'ದಳ'ಪತಿಗಳಿಗೆ ತಿರುಗೇಟು:ಸ್ವರೂಪ್ ಅವರ ತಂದೆ ನಗರಸಭೆ ಅಧ್ಯಕ್ಷರಾಗಿ ಆರು ಬಾರಿ ಚುನಾವಣೆಯಲ್ಲಿ ಅಭ್ಯರ್ಥಿ ಆಗಿದ್ದರು. 40 ವರ್ಷ ಆ್ಯಕ್ಟೀವ್ ರಾಜಕೀಯದಲ್ಲಿ ಇದ್ದವರು ಎನ್ನುವ ಮೂಲಕ 'ದಳ'ಪತಿಗಳ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾನು ಮಾಡಿದ ಕೆಲಸ ಏನೆಂದು ನಿನ್ನೆ ಜನರು ಉತ್ತರ ಕೊಟ್ಟಿದಾರೆ. ನಾನು ಯಾರಿಗೂ ಸಂದೇಶ ಕೊಟ್ಟಿಲ್ಲ. ಜನರೇ ನನ್ನ ಎದುರಾಳಿಗಳಿಗೆ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.