ಹಾಸನ/ಚನ್ನರಾಯಪಟ್ಟಣ :ಜನರು ತಮ್ಮ ಜೀವನ ನಿರ್ವಹಣೆಗಾಗಿ ತಮ್ಮೂರು ಬಿಟ್ಟು ಸಿಟಿ ಸೇರೋದು ಸಹಜ. ಆದ್ರೆ, ಕೊರೊನಾ ಸೃಷ್ಟಿಸಿದ ಅವಾಂತರದಿಂದ ಒಂದಿಷ್ಟು ವಿಚಾರಗಳು ಬದಲಾಗಿಬಿಟ್ಟಿವೆ. ಇಲ್ಲೊಂದು ಕುಟುಂಬದ ಅಪ್ಪ-ಮಗ ಸಿಟಿಯಿಂದ ಊರಿಗೆ ಬಂದು ಕೃಷಿ ಮತ್ತು ಕುಕ್ಕುಟೋದ್ಯಮ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ತಂದೆ ಧನಂಜಯ್ ವೃತ್ತಿಯಲ್ಲಿ ಓಲಾ ಕ್ಯಾಬ್ ಚಾಲಕ. ಮಗ ವಿಜಯ್ ಕುಮಾರ್ ಕೂಡ ಹೈದರಾಬಾದ್ನಲ್ಲಿರುವ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಹಿನ್ನೆಲೆ, ಮನೆಯಿಂದಲೇ ಕೆಲಸ ಮಾಡುವ ನಿಯಮವನ್ನು ಕಂಪನಿ ಮಾಡಿದ್ದರಿಂದ ತನ್ನ ಕೆಲಸದೊಟ್ಟಿಗೆ ತಂದೆಯೊಂದಿಗೆ ಕೈಜೋಡಿಸಿ ಸ್ವಗ್ರಾಮದಲ್ಲಿಯೇ ಕೆಲಸ ಮಾಡುತ್ತಿದ್ದಾರೆ.
ಧನಂಜಯ್ ಬೆಂಗಳೂರಿನಿಂದ ವಾಪಸ್ ಕಾರುಗಳನ್ನು ತೆಗೆದುಕೊಂಡು ಸ್ವಗ್ರಾಮ ಚನ್ನೇನಹಳ್ಳಿಗೆ ಬಂದು ಮನೆಯಲ್ಲಿ ಕುಳಿತಿದ್ದಾಗ ಯೋಚನೆಗೆ ಬಂದಿದ್ದು ಒಂದೇ, ಅದುವೇ ಕೃಷಿ ಮಾಡೋ ಮೂಲಕ ಏನಾದರೂ ಸಾಧಿಸೋಣ ಅಂತ. ಆದರೆ, ಚನ್ನರಾಯಪಟ್ಟಣ ತಾಲೂಕನ್ನು ಬರಪೀಡಿತ ಪ್ರದೇಶ ಎಂದೇ ಕರೆಯಲಾಗುತ್ತದೆ. ಇಲ್ಲಿ ನೀರಿಗೆ ಸಾಕಷ್ಟು ಸಮಸ್ಯೆ ಇದೆ. ಇದರ ಮಧ್ಯೆ ಬರಡಾಗಿದ್ದ ಎರಡು ಎಕರೆ ಪಿತ್ರಾರ್ಜಿತ ಜಮೀನಿನಲ್ಲಿ ಈಗ ಬಂಗಾರದ ಬೆಳೆ ಬೆಳೆದಿದ್ದಾರೆ. ಜೊತೆಗೆ ಕೋಳಿಗಳನ್ನು ಸಾಕುತ್ತಿದ್ದಾರೆ.
ಕೇವಲ ಎರಡು ಎಕರೆ ಪ್ರದೇಶದಲ್ಲಿ ಇವರು ಬಾಳೆ, ತೆಂಗು, ಹಲಸು, ಮಾವು, ಸಪೋಟ, ಸೀಬೆ ಸೇರಿದಂತೆ ಎಂಟಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ಬೆಳೆಯುವ ಜೊತೆಗೆ ಕೋಳಿಸಾಕಾಣಿಕೆ ಮಾಡುತ್ತಿದ್ದಾರೆ. ಒಂದುವರೆ ವರ್ಷಗಳಿಂದ ಶ್ರಮಪಟ್ಟು ಮಾಡಿದ ಕೆಲಸಕ್ಕೆ ಈಗ ಪ್ರತಿಫಲ ಸಿಗುತ್ತಿದೆ. ಈಗಾಗಲೇ ಅರ್ಧದಷ್ಟು ಹಾಕಿದ ಬಂಡವಾಳ ವಾಪಸ್ ಬಂದಿದ್ದು, ಇನ್ನು ಎರಡು ವರ್ಷಗಳಲ್ಲಿ ಉಳಿದ ಆದಾಯವನ್ನು ಪಡೆಯುತ್ತೇವೆ ಎನ್ನುತ್ತಾರೆ ಧನಂಜಯ್ ಮತ್ತು ಯುವ ಕೃಷಿಕ ವಿಜಯಕುಮಾರ್.