ಹಾಸನ: ಮಹಾಮಾರಿ ಕೊರೊನಾ ಕೆಂಗಣ್ಣು ಜಿಲ್ಲೆಯ ಮೇಲೆ ಬಿದ್ದಿದ್ದು, ಇದೀಗ 60 ವರ್ಷದ ವೃದ್ಧ ಬಲಿಯಾಗಿದ್ದಾರೆ. ಇದು ಜಿಲ್ಲೆಯಲ್ಲಿ ಕೊರೊನಾಕ್ಕೆ ಮೊದಲ ಬಲಿಯಾಗಿದೆ.
ಹಾಸನ ಜಿಲ್ಲೆಯಲ್ಲಿ ಕೊರೊನಾಗೆ ಮೊದಲ ಬಲಿ - ಹಾಸನ ಲೆಟೆಸ್ಟ್ ನ್ಯೂಸ್
ಮಹಾಮಾರಿ ಕೊರೊನಾ ಹಾಸನ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದೆ. ಮುಂಬೈನಿಂದ ಬಂದವರ ದೇಹವನ್ನ ಹೊಕ್ಕಿ ಬಂದಿರುವ ಕೊರೊನಾ ಬಲಿ ಪಡೆದಿದ್ದು ಮಾತ್ರ ಸ್ಥಳೀಯರನ್ನ. ಹೀಗಾಗಿ ಮುಂಬೈ ಕನ್ನಡಿಗರನ್ನ ಸದ್ಯದ ಮಟ್ಟಿಗೆ ದೂರವಿಡಿ ಎನ್ನುವುದು ಜಿಲ್ಲೆಯ ಜನರ ಆಗ್ರಹವಾಗಿದೆ.
ಹಾಸನ ಮೂಲದ 60 ವರ್ಷದ ವಯೋವೃದ್ಧ ಕೊರೊನಾಗೆ ಬಲಿಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಮೃತರಿಗೆ ವರ್ಷದ ಹಿಂದೆ ಮೆದುಳಿಗೆ ಸ್ಪ್ರೋಕ್ ಆಗಿರುವುದರ ಜೊತೆಗೆ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರು. ಉಸಿರಾಟದ ತೊಂದರೆಯಿಂದ ಜೂ.10ರಂದು ಅವರು ತಾಲೂಕಿನ ಸಾಲಗಾಮೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿದ್ದರು. ಚಿಕಿತ್ಸೆ ಪಡೆಯುವ ವೇಳೆಯಲ್ಲಿಯೇ ಇವರಿಗೆ ಜ್ವರ ಮತ್ತು ಗಂಟಲು ದ್ರವ ಪರೀಕ್ಷೆ ಸಹ ಮಾಡಲಾಗಿತ್ತು. ಜೂ.11ರಂದು ವರದಿ ಬಂದಿದ್ದು, ವರದಿಯಲ್ಲಿ ಸೋಂಕು ಪತ್ತೆಯಾಗಿತ್ತು.
ಇಂದು ಚಿಕಿತ್ಸೆಗೆ ಸ್ಪಂದಿಸದೆ ವ್ಯಕ್ತಿ ಕೊನೆಯುಸಿರೆಳೆದಿದ್ದು, ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಲಾಕ್ ಡೌನ್ ಆದ ಬಳಿಕ ಮೊದಲ ಸುಮಾರು 45 ದಿನಗಳ ಕಾಲ ಜಿಲ್ಲೆಯು ಹಸಿರು ವಲಯವಾಗಿತ್ತು. ಬಳಿಕ ಸರ್ಕಾರ ಹೊರರಾಜ್ಯದವರು ತಮ್ಮ ಸ್ವಂತ ರಾಜ್ಯಗಳಿಗೆ ತೆರಳಲು ಅನುಮತಿ ನೀಡಿದ್ದರಿಂದ, ದೂರದ ಮಹಾರಾಷ್ಟ್ರದಿಂದ ಸಾಗರೋಪಾದಿಯಲ್ಲಿ ರಾಜ್ಯಕ್ಕೆ ಸ್ಥಳೀಯರು ಆಗಮಿಸಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.
48ನೇ ದಿನ ಜಿಲ್ಲೆಯಲ್ಲಿ 5 ಪಾಸಿಟಿವ್ ಪ್ರಕರಣ ಪತ್ತೆಯಾದವು. ಬಳಿಕ ಸೋಂಕು ಪ್ರಕರಣಗಳು ಕಡಿಮೆಯಾಗದೆ ಏರಿಕೆಯಾಗುತ್ತಲೇ ಹೋಗಿ ಇಂದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 226ಕ್ಕೆ ಬಂದು ತಲುಪಿದೆ.
ಒಂದು ಕಡೆ ಲಾಕ್ ಡೌನ್ ಸಡಿಲಿಕೆ ಆಯಿತಲ್ಲ ಎನ್ನುವ ಸಂತೋಷ ಕೆಲವರಿಗಾದರೆ, ಮತ್ತೆ ಕೆಲವರಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿರುವು ಭಯದ ಹುಟ್ಟಿಸಿದೆ. ಸೋಂಕಿತ ಸಾವಿಗೀಡಾದ ಹಿನ್ನೆಲೆಯಲ್ಲಿ ಜಿಲ್ಲೆಯನ್ನ ಮತ್ತೆ ಲಾಕ್ ಡೌನ್ ಮಾಡುವುದೋ ಅಥವಾ ಸಾಲಗಾಮೆ ಹೋಬಳಿಯ ಪ್ರದೇಶವನ್ನ ಮಾತ್ರ ಸೀಲ್ ಡೌನ್ ಮಾಡುವುದಾ ಎಂದು ಸರ್ಕಾರದ ನಿರ್ದೇಶನಕ್ಕಾಗಿ ಜಿಲ್ಲಾಧಿಕಾರಿಗಳು ಎದುರು ನೋಡುತ್ತಿದ್ದಾರೆ.