ಹಾಸನ:ಒಮ್ನಿ ಕಾರು ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಪುಟ್ಟ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಅರಸೀಕೆರೆ ಪಟ್ಟಣದ ಎಪಿಎಂಸಿ ಗೇಟ್ ಮುಂಭಾಗದಲ್ಲಿ ನಡೆದಿದೆ. ಮಗನ ಸಾವಿನಿಂದಾಗಿ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ತುತ್ತಿನ ಚೀಲ ತುಂಬಿಸಿಕೊಳ್ಳಲು ಗಂಡ-ಹೆಂಡತಿ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದರು. ಮಗ ಚಿಕ್ಕವನಾಗಿದ್ದರಿಂದ ಮನೆಯಲ್ಲಿ ಒಬ್ಬನನ್ನೇ ಬಿಟ್ಟು ಹೋಗಲು ಸಾಧ್ಯವಾಗದ ಕಾರಣ ಆತನನ್ನೂ ಜೊತೆಯಲ್ಲಿಯೇ ಕರೆದುಕೊಂಡು ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಶಾಲೆಗೆ ರಜೆಯಿದ್ದ ಕಾರಣ ಪ್ರತಿನಿತ್ಯ ಕೆಲಸಕ್ಕೆ ಹೋಗುವಾಗ ಮಗನನ್ನು ಕೂಡ ಆಕೆ ಕರೆದುಕೊಂಡು ಹೋಗುತ್ತಿದ್ದರು. ಆದ್ರೆ ಇಂದು ಎದುರಿನಿಂದ ಬಂದ ಯಮಸ್ವರೂಪಿ ಮಾರುತಿ ಒಮ್ನಿ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ 4 ವರ್ಷದ ಬಾಲಕ ಯೋಗೇಶ್ ಮೃತಪಟ್ಟಿದ್ದಾನೆ. ಘಟನೆಗೆ ಕಾರು ಚಾಲಕನ ನಿರ್ಲಕ್ಷ್ಯ ಮತ್ತು ಅತಿವೇಗವೇ ಕಾರಣ ಎನ್ನಲಾಗಿದೆ.
ಓದಿ: ಒತ್ತಾಯಪೂರ್ವಕ ಬಂದ್ ಮಾಡಿಸಿದ್ರೆ ಕ್ರಮ: ಗೃಹ ಸಚಿವ ಬೊಮ್ಮಾಯಿ ಎಚ್ಚರಿಕೆ
ಘಟನೆಯಲ್ಲಿ ಗಂಡ-ಹೆಂಡತಿಗೆ ಗಂಭೀರ ಗಾಯಗಳಾಗಿದ್ದು, ತಾಯಿಯ ಕೈ ಮತ್ತು ಕಾಲಿಗೆ ಪೆಟ್ಟಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಅರಸೀಕೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಅರಸೀಕೆರೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.