ಸಕಲೇಶಪುರ: ವನಗೂರು ಸುತ್ತಮುತ್ತ ಹೊರ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿರುವುದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಯಸಳೂರು ಹಾಗೂ ಹೆತ್ತೂರು ಹೋಬಳಿಯ ಕೆಲವು ಗ್ರಾಮಗಳಲ್ಲಿ ಹೋಂ ಕ್ವಾರಂಟೈನ್‌ಗೆ ಒಳಗಾಗಿರುವ ವ್ಯಕ್ತಿಗಳು ಸಾರ್ವಜನಿಕ ಪ್ರದೇಶದಲ್ಲಿ ಸಂಚರಿಸುತ್ತಿದ್ದಾರೆ ಹಾಗೂ ಹೊರ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ಶಾಸಕ ಎಚ್.ಕೆ ಕುಮಾರಸ್ವಾಮಿ ಹೆತ್ತೂರು, ವನಗೂರು, ಹೊಸೂರು, ಚಂಗಡಹಳ್ಳಿ, ಉಚ್ಚಂಗಿ, ಯಸಳೂರು, ಗ್ರಾ.ಪಂ.ಗಳಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಮಟ್ಟದ ಕೋವಿಡ್-19 ನಿಯಂತ್ರಣದ ಟಾಸ್ಕ್ ಪೋರ್ಸ್ ಸಿಬ್ಬಂದಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕೆಲವು ಪಂಚಾಯಿತಿಗಳ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವನಗೂರು ಗ್ರಾ.ಪಂ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಗಡಿ ಹಂಚಿಕೊಂಡಿದ್ದು ಸುಮಾರು 600 ಜನ ವನಗೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಹೊರ ಊರುಗಳಿಂದ ಬಂದಿದ್ದಾರೆ.
ಜೊತೆಗೆ ಹೆತ್ತೂರು, ಹೊಸೂರು, ಚಂಗಡಹಳ್ಳಿ, ಉಚ್ಚಂಗಿ, ಯಸಳೂರು, ಗ್ರಾ.ಪಂಗಳಿಗೆ ಸಹ ಹೊರ ಊರುಗಳಿಂದ 1000ಕ್ಕೂ ಹೆಚ್ಚು ಜನ ಬಂದಿರುವ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಹೊರ ಊರುಗಳಿಂದ ಜನ ಬಾರದಂತೆ ಪಂಚಾಯತಿ ಟಾಸ್ಕ್ ಪೋರ್ಸ್ ಎಚ್ಚರವಹಿಸಬೇಕು ಹಾಗೂ ಗಡಿಭಾಗದಲ್ಲಿ ಮತ್ತಷ್ಟು ಭದ್ರತೆ ಹೆಚ್ಚಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಹೆತ್ತೂರು ಗ್ರಾ.ಪಂಗೆ ಭೇಟಿ ನೀಡಿದ ಶಾಸಕರು ತರಕಾರಿ, ಹಣ್ಣು, ದಿನಸಿಗಳನ್ನು ಎಪಿಎಂಸಿ ಆವರಣದಲ್ಲಿ ಮಾರಾಟಕ್ಕೆ ಸೂಚಿಸಿದರು. ಜಿ.ಪಂ ಸದಸ್ಯೆ ಉಜ್ಮಾ ರುಜ್ವಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್, ಸಿಡಿಪಿಒ ಹರೀಶ್ ಮತ್ತಿತರರು ಹಾಜರಿದ್ದರು.