ಹಾಸನ:ಕೊರೊನಾ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಲಾಕ್ಡೌನ್ ಮತ್ತು ರಾತ್ರಿ ಕರ್ಫ್ಯೂ ಜಾರಿಗೆ ರಾಜ್ಯ ಸರ್ಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಡಳಿತ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ ಈ ಪ್ರದೇಶದಲ್ಲಿ ಮಾತ್ರ ಯಾವುದೇ ಭಯ ಭೀತಿಯಿಲ್ಲದೆ ಮಾರುಕಟ್ಟೆ ನಡೆಸುತ್ತಿರುವುದು ಬೇಸರದ ಸಂಗತಿ.
ಇಂತಹ ಒಂದು ದೃಶ್ಯ ಕಂಡು ಬಂದಿದ್ದು ಹಾಸನದ ಹೊರವಲಯದ ಕೈಗಾರಿಕಾ ಪ್ರದೇಶದ ಶಾಹಿ ಗಾರ್ಮೆಂಟ್ಸ್ ಬಳಿ. ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶೇಕಡಾ 50ರಷ್ಟು ನೌಕರರು ಮಾತ್ರ ಕೆಲಸ ನಿರ್ವಹಿಸಬೇಕು. ಸರ್ಕಾರದ ಆದೇಶವಿದ್ದರೂ ಈ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಗಾರ್ಮೆಂಟ್ಸ್ ಮಾತ್ರ ನಿಯಮವನ್ನು ಉಲ್ಲಂಘನೆ ಮಾಡಿ ಗುಂಪು ಗುಂಪಾಗಿ ನೌಕರರನ್ನು ಕಳಿಸುತ್ತಿರುವ ದೃಶ್ಯ ಸ್ಥಳೀಯ ವಾಸಿಗಳಿಗೆ ಆತಂಕ ಸೃಷ್ಟಿ ಮಾಡುತ್ತಿದೆ.
ಕಾರ್ಖಾನೆಯಿಂದ ಹೊರಗೆ ಬರುವಾಗ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮನಸೋಇಚ್ಛೆ ಓಡಾಡುತ್ತಿರುವುದು SOP ನಿಯಮವನ್ನು ಕಂಪನಿಗಳು ಉಲ್ಲಂಘನೆ ಮಾಡುತ್ತಿರುವುದು ಕೋವಿಡ್-19 ಮತ್ತಷ್ಟು ಹರಡುವಿಕೆಗೆ ಕಾರಣವಾಗುತ್ತಿದೆ.
ಮತ್ತೊಂದು ಕಡೆ ಗಾರ್ಮೆಂಟ್ಸ್ ಸಮೀಪವೇ ಇಂದು ಸಂಜೆ ತರಕಾರಿ ಮಾರ್ಕೆಟ್ ಮಾಡಲು ಅವಕಾಶ ನೀಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಎಂದಿನಂತೆ ಕಟ್ಟಿನಕೆರೆ ಮಾರುಕಟ್ಟೆ ಮತ್ತು ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡದೆ ಗಾರ್ಮೆಂಟ್ಸ್ ಫ್ಯಾಕ್ಟರಿ ಮುಂದೆ ತರಕಾರಿ ವ್ಯಾಪಾರ ಮಾಡಲು ಅವಕಾಶ ಕೊಟ್ಟವರು ಯಾರು ಎಂಬ ಪ್ರಶ್ನೆಯನ್ನು ಸ್ಥಳೀಯರು ಕೇಳುತ್ತಿದ್ದಾರೆ. ಇದಕ್ಕೆ ನಗರಸಭೆ ಅಥವಾ ಜಿಲ್ಲಾಡಳಿತವೇ ಉತ್ತರ ಕೊಡಬೇಕಾಗಿದೆ.
ಬೆಳಗ್ಗೆಯಿಂದ ಕೋವಿಡ್ ಲಾಕ್ಡೌನ್ ಮತ್ತು ಕರ್ಫ್ಯೂಗೆ ಉತ್ತಮ ಬೆಂಬಲ ಸಿಕ್ಕಿತು ಎನ್ನುವಷ್ಟರಲ್ಲಿ ಕಾರ್ಖಾನೆಗಳ ಮುಂದೆ ಮಾರುಕಟ್ಟೆ ತೆರೆದಿರುವುದು ಸ್ಥಳೀಯ ನಗರವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ.