ಹಾಸನ:ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ಅನ್ನು ಮೇಲ್ದರ್ಜೆಗೇರಿಸಿ ಟೋಲ್ ರಸ್ತೆ ಮಾಡಿ ಎನ್‌ಹೆಚ್ 75 ಎಂದು ಮರು ನಾಮಕರಣ ಮಾಡಿ ಒಂದು ದಶಕವಾಗುತ್ತಾ ಬಂತು. ಆದರೂ ಇಂದಿಗೂ ರಸ್ತೆ ಕಾಮಗಾರಿ ಮಾತ್ರ ಮುಗಿದಿಲ್ಲ.
ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರಿನಿಂದ ಹಾಸನದವರೆಗೆ ಚತುಷ್ಪತ ರಸ್ತೆ ಪೂರ್ಣಗೊಂಡಿದೆ. ಹಾಸನದಿಂದ ಜಿಲ್ಲೆಯ ಗಡಿ ಭಾಗ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ತನಕ ಕಾಮಗಾರಿ ಪ್ರಾರಂಭವಾಗಿ ಐದು ವರ್ಷಗಳು ಕಳೆದರೂ ಕೆಲಸ ಮುಗಿಯುತ್ತಿಲ್ಲ. ಹಾಸನದ ಹೊರವಲಯದಲ್ಲಿ ರಸ್ತೆ ಮಾಡಲು ರೈತರಿಂದ ಜಮೀನು ಸ್ವಾಧೀನಪಡಿಸಿಕೊಂಡು ನಾಲ್ಕು ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭಗೊಂಡಿತ್ತು. ಗುತ್ತಿಗೆ ಪಡೆದ ಗುತ್ತಿಗೆದಾರ ರಸ್ತೆ ನಿರ್ಮಾಣ ಮಾಡುತ್ತಿರುವಾಗಲೇ 3 ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ರಸ್ತೆ ಸಂಪೂರ್ಣ ಹಾಳಾಗಿ ಹೋಗಿತ್ತು. ಇದರಿಂದ ನಷ್ಟ ಅನುಭವಿಸಿದ ಗುತ್ತಿಗೆದಾರ ಮತ್ತೆ ರಸ್ತೆ ಕಾಮಗಾರಿ ಮುಂದುವರಿಸಲಿಲ್ಲ.
ಪೂರ್ಣಗೊಳ್ಳದ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಬಾರಿಯೂ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಸರ್ಕಾರ ಆದೇಶ ನೀಡಿತ್ತು. ಅದರಂತೆ ಮತ್ತೆ ಅದೇ ಗುತ್ತಿಗೆದಾರ ಕೆಲಸ ಪ್ರಾರಂಭ ಮಾಡಲು ಬೇಕಾದ ಮರಳು, ಜಲ್ಲಿ, ಸಿಮೆಂಟ್, ಡಾಂಬರು ಸೇರಿದಂತೆ ವಿವಿಧ ರೀತಿಯ ಯಂತ್ರೋಪಕರಣ ತಂದು ಮತ್ತೆ ಕೆಲಸ ಪ್ರಾರಂಭ ಮಾಡಿದ್ದರು. ಆದರೆ, ಮತ್ತೆ ಮಳೆರಾಯ ಅಡ್ಡಿಪಡಿಸಿ ಗುತ್ತಿಗೆದಾರನ ಬಂಡವಾಳ ಮಣ್ಣು ಪಾಲಾಗಿತ್ತು.
ಇನ್ನೂ ಪೂರ್ಣಗೊಳ್ಳದ ಕಾಮಗಾರಿ ಇದರಿಂದ ಗುತ್ತಿಗೆದಾರನಿಗೆ ಮತ್ತೆ ಬಂಡವಾಳ ಹಾಕಲು ಹಣವಿಲ್ಲದೆ ಸರ್ಕಾರದ ಮೊರೆ ಹೋಗಿದ್ದ. ಆದರೆ, ಕೆಲಸ ಪೂರ್ಣಗೊಳ್ಳದ ಹಿನ್ನೆಲೆ ಸರ್ಕಾರ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಹೀಗಾಗಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹೀಗಾಗಿ ಐದು ವರ್ಷಗಳ ಹಿಂದೆ ತಂದಿಟ್ಟ ಯಂತ್ರೋಪಕರಣಗಳು ಇಂದಿಗೂ ನಿಂತ ಜಾಗದಲ್ಲಿಯೇ ನಿಂತು ತುಕ್ಕು ಹಿಡಿಯುತ್ತಿದೆ.
ನಿಂತಲ್ಲೇ ತುಕ್ಕು ಹಿಡಿಯುತ್ತಿರುವ ಯಂತ್ರಗಳು ಈ ವರ್ಷ ಮಾರ್ಚ್ನಿಂದ ಕೋವಿಡ್-19 ಹಿನ್ನೆಲೆ ಸ್ತಬ್ದಗೊಂಡಿದ್ದ ಎಲ್ಲಾ ಚಟುವಟಿಕೆಗಳು ಆರಂಭವಾಗುತ್ತಿದೆ. ರಸ್ತೆ ಕಾಮಗಾರಿ ಮಾತ್ರ ಪ್ರಾರಂಭವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಆಲೂರು ಸಮೀಪ ಅಲ್ಪ ಸ್ವಲ್ಪ ಕಾಮಗಾರಿ ಪ್ರಾರಂಭವಾಗಿದ್ದು, ಸುರಂಗ ಮಾರ್ಗದ ಕೆಲಸ ಪ್ರಗತಿಯಲ್ಲಿದೆ. ಆದರೆ ಮಳೆ ಅಡ್ಡಿಪಡಿಸುತ್ತಿರುವುದರಿಂದ ಗುತ್ತಿಗೆದಾರರಿಗೆ ಮತ್ತೆ ತಲೆನೋವಾಗಿದೆ.
ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಹೀಗಾಗಿ, ರಾಷ್ಟ್ರೀಯ ಹೆದ್ದಾರಿ 75 ರ ಹಾಸನ ಗುಂಡ್ಯವರೆಗಿನ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲೆಂದರಲ್ಲಿ ಅರ್ಧಂಬರ್ಧ ರಸ್ತೆ ಕಾಮಗಾರಿ ಆಗಿರುವುದರಿಂದ ನೂರು ಕಿಲೋಮೀಟರ್ ಅಂತರವನ್ನು ಸುಮಾರು ಮೂರು ಗಂಟೆಗಳ ಕಾಲ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಇದರ ಮಧ್ಯೆ ಅಲ್ಲಲ್ಲಿ ಸಿಗುವ ಗುಂಡಿಗಳು ವಾಹನವನ್ನು ಹಾಳುಮಾಡುತ್ತಿವೆ. ರಾತ್ರಿ ವೇಳೆಯಲ್ಲಂತೂ ವಾಹನಗಳಿಗೆ ಗುಂಡಿಗಳು ಕಾಣಿಸದೆ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಈಗಲಾದರೂ ಸರ್ಕಾರ ಎಚ್ಚೆತ್ತು ಕೂಡಲೇ ರಸ್ತೆ ಕಾಮಗಾರಿ ಮುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.