ಹಾಸನ:ಎನ್ ಹೆಚ್ 75 ರಲ್ಲಿ ಜುಲೈ 23 ರಂದು ನಡೆದಿದ್ದ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸುವಲ್ಲಿ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಶ್ರೀನಿವಾಸ್ ಎಂಬಾತನನ್ನು ಹೆಡೆಮುರಿ ಕಟ್ಟಿರುವ ಚನ್ನರಾಯಪಟ್ಟಣ ಪೊಲೀಸರು ರಾಷ್ಟ್ರೀಯ ಹೆದ್ದಾರಿ 75 ರ ಸಮೀಪದ ತೋಪಿನಲ್ಲಿ ಪತ್ತೆಯಾಗಿದ್ದ ಯುವತಿಯ ಮೃತದೇಹದ ಸುತ್ತ ಎದ್ದಿದ್ದ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಆರೋಪಿ ಬಂಧನದ ಬಳಿಕ ಕೊಲೆಗೆ ಅವರಿಬ್ಬರ ಮಧ್ಯೆ ಇದ್ದ ಪ್ರೀತಿಯೇ ಕಾರಣವೆಂದು ತಿಳಿದು ಬಂದಿದೆ.
ಪ್ರಕರಣ ಹಿನ್ನೆಲೆ:
ಗೀತಾ(ಹೆಸರು ಬದಲಿಸಲಾಗಿದೆ) ಮತ್ತು ಆರೋಪಿ ಶ್ರೀನಿವಾಸ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಶ್ರೀನಿವಾಸ್ ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದ ವಿಚಾರ ಗೀತಾಳಿಗೂ ತಿಳಿದಿತ್ತು. ಸ್ನೇಹ ಪ್ರಿತಿಯಾಗಿ, ಪ್ರೀತಿ ಲೈಂಗಿಕ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು. ಪರಿಣಾಮ ಗೀತಾ ಗರ್ಭ ಧರಿಸಿದ್ದಳು. ಈ ವಿಚಾರವಾಗಿ ಶ್ರೀನಿವಾಸನನ್ನು ಮದುವೆಯಾಗುವಂತೆ ಕೇಳಿದಾಗ, ಆತ ಗರ್ಭಪಾತ ಮಾಡಿಸಿಕೊಳ್ಳುವಂತೆ ಹೇಳಿದ್ದ. ಇದಕ್ಕೊಪ್ಪದ ಗೀತಾ ಈ ವಿಷಯವನ್ನು ಮನೆಯವರಿಗೆ ಹೇಳುವುದಾಗಿ ಹೆದರಿಸಿದ್ದಳು ಎನ್ನಲಾಗ್ತಿದೆ.
ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಚನ್ನರಾಯಪಟ್ಟಣ ಪೊಲೀಸರು ಇದರಿಂದ ಕಂಗಾಲಾದ ಶ್ರೀನಿವಾಸ್ ಪ್ರಿಯತಮೆ ಗೀತಾಳನ್ನು ಪುಸಲಾಯಿಸಿ ಬೆಂಗಳೂರಿನಿಂದ ಕಾರಿನಲ್ಲಿ ಕರೆತಂದು ದೇವಲಾಯದವೊಂದರ ಹತ್ತಿರ ಆಕೆಯ ವೇಲ್ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ನಂತರ ರಾಷ್ಟೀಯ ಹೆದ್ದಾರಿ 75 ರ ಸಮೀಪದ ತೋಪಿನಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದ.
ದೇವಾಲಯದ ಅರ್ಚಕರೊಬ್ಬರು ಮೃತದೇಹ ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು. ಜುಲೈ 23 ರಂದು ಯುವತಿಯ ಮೃತ ದೇಹದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಫೋಟೊ ಗಮನಿಸಿದ್ದ ಗೀತಾ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೇವಾಲಯದ ಅರ್ಚಕರ ಹೇಳಿಕೆ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣದ ಪತ್ತೆಗೆ ಹೊಳೆನರಸೀಪುರ ಡಿವೈಎಸ್‌ಪಿ ಲಕ್ಷ್ಮೇಗೌಡ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ್ದರು. ಗೀತಾ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದ ಶ್ರೀನಿವಾಸ್ ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ವಾಸ್ತವ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.