ಹಾಸನ:ವಿವಿಧ ಜಾತಿ, ಧರ್ಮ, ಭಾಷೆಗಳಿದ್ದರೂ ಭಾರತ ಇಂದಿಗೂ ಒಗ್ಗೂಡಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದಿಂದ ಮಾತ್ರ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದ್ದಾರೆ.
ರಾಷ್ಟ್ರೀಯ ಮತದಾರರ ದಿನದ ನಿಮಿತ್ತ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ಜಿಲ್ಲಾಧಿಕಾರಿ ನಗರದ ಕಲಾಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಭದ್ರ ಪ್ರಜಾಪ್ರಭುತ್ವಕ್ಕೆ ಸರ್ವರ ಪಾಲ್ಗೊಳ್ಳುವಿಕೆ ಅತೀ ಮುಖ್ಯವಾಗಿದೆ ಎಂದರು.
ಭಾರತೀಯ ಚುನಾವಣಾ ಆಯೋಗವು ಸಂಸ್ಥಾಪನಾ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ನಾವೆಲ್ಲರೂ ಚುನಾವಣೆಯಲ್ಲಿ ಸಕ್ರಿಯವಾಗಿ ತೋಡಗಿಸಿಕೊಳ್ಳಬೇಕು ಎಂದರು.
2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 17 ಲಕ್ಷ ಅರ್ಹ ಮತದಾರರಿದ್ದು, ಕೇವಲ ಶೇಕಡಾ 67 ರಷ್ಟು ಮತ ಚಲಾವಣೆಯಾಗಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ 18 ವರ್ಷ ತುಂಬಿರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯಾ ಬಂದು 70 ವರ್ಷ ಕಳೆದಿದ್ದರೂ ಮತದಾನದ ಬಗ್ಗೆ ಸಾರ್ವಜನಿಕರು ಹೆಚ್ಚಿನ ಆಸಕ್ತಿ ಮತ್ತು ಅದರ ಮಹತ್ವ ಅರಿಯದಿರುವುದು ವಿಷಾದನೀಯ ಹಾಗಾಗಿ ಯುವ ಜನರು ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಹೊಣೆ ಹೊರಬೇಕೆಂದು ಕರೆ ನೀಡಿದ್ದಾರೆ. ರಾಷ್ಟ್ರೀಯ ಮತದಾರ ದಿನದ ನಿಮಿತ್ತ ಜಿಲ್ಲಾಧಿಕಾರಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು.