ಹಾಸನ: ಹಳೇ ದ್ವೇಷದ ಹಿನ್ನೆಲೆ ಡಬಲ್ ಬ್ಯಾರಲ್ ಗನ್‍ನಿಂದ ಯುವಕನೊಬ್ಬನನ್ನು ಶೂಟ್ ಮಾಡಿ ಕೊಲೆ ಮಾಡಿರುವ ಘಟನೆ ಆಲೂರು ತಾಲೂಕಿನಲ್ಲಿ ನಡೆದಿದೆ.
ಆಲೂರು ತಾಲೂಕಿನ ಸೊಪ್ಪನಹಳ್ಳಿ ಗ್ರಾಮದ ಯುವಕ ಮಧು (28) ಕೊಲೆಗೀಡಾಗಿರುವ ಯುವಕ. ರೂಪೇಶ್ ಎಂಬಾತ ಹಳೇ ದ್ವೇಷದ ಹಿನ್ನೆಲೆ ಮಧುವನ್ನು ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ. ಹತ್ಯೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಆರ್. ಶ್ರೀನಿವಾಸ್ ಗೌಡ, ಎಸ್ಪಿ ಏನಿದು ಪ್ರಕರಣ:ಸೊಪ್ಪಿನಹಳ್ಳಿ ಗ್ರಾಮದ ಯುವತಿಯನ್ನು ಮಧು ಪ್ರೀತಿಸುತ್ತಿದ್ದ. ಮದುವೆಯಾಗಬೇಕೆಂದು ಆಕೆಯನ್ನು ಅಪಹರಣ ಮಾಡಿದ್ದ. ಈ ಬಗ್ಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಜೈಲು ಸೇರಿದ್ದ ಮಧು ಬಳಿಕ ಬಿಡುಗಡೆಯಾಗಿದ್ದ. ಜೈಲಿಗೆ ಹೋಗಿ ಬಂದ ಬಳಿಕ ನನ್ನನ್ನು ಜೈಲಿಗೆ ಕಳುಹಿಸಿದ ಯಾರನ್ನೂ ಸುಮ್ಮನೇ ಬಿಡುವುದಿಲ್ಲ ಎಂದು ಹೇಳುತ್ತಾ ತಿರುಗಾಡುತ್ತಿದ್ದನಂತೆ. ಈ ವಿಚಾರವಾಗಿ ಕೊಲೆಯಾದ ಮಧು ಮತ್ತು ರೂಪೇಶ್ ಮಧ್ಯೆ ದ್ವೇಷ ಇತ್ತು. ಒಬ್ಬರನೊಬ್ಬರು ಕೊಲ್ಲುವುದಕ್ಕೆ ಸಂಚು ಕೂಡ ಮಾಡಿದ್ದರು. ಈ ಮಧ್ಯೆ ಬೈರಾಪುರ ಸಮೀಪದ ಸೊಪ್ಪಿನಹಳ್ಳಿ ರಸ್ತೆಯಲ್ಲಿ ಮಧುವನ್ನು ರೂಪೇಶ್ ಗುಂಡು ಹಾರಿಸಿ ಕೊಂದಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ. ಕೊಲೆಯಾದ ಮಧು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.