ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಆಸ್ತಿ ವಿಚಾರದ ಹಿನ್ನೆಲೆ ವೃದ್ಧ ದಂಪತಿಯನ್ನು ಸಂಬಂಧಿಕರೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹಾಸನದಲ್ಲಿ ವೃದ್ಧ ದಂಪತಿ ಕೊಲೆ: ಆಸ್ತಿಗಾಗಿ ಸಂಬಂಧಿಕರಿಂದ ಕೃತ್ಯ ಶಂಕೆ - Channarayapatnam of Hassan
ಆಸ್ತಿಗಾಗಿ ಸಂಬಂಧಿಕರೇ ವೃದ್ಧ ದಂಪತಿಯನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಹಾಸನ ಜಿಲ್ಲೆಯಲ್ಲಿ ಕೇಳಿ ಬಂದಿದೆ.
ಮುರಳೀಧರ್ (71) ಹಾಗೂ ಉಮಾದೇವಿ (67) ಕೊಲೆಯಾದ ದಂಪತಿ. ಆಗಸ್ಟ್ 29ರ ರಾತ್ರಿ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೊಲೆಯಾದ ಮುರಳೀಧರ್ ತಂದೆ ಕೃಷ್ಣಮೂರ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಹೀಗಾಗಿ ಸರ್ಕಾರ ಇವರಿಗೆ 90 ಎಕರೆ ಜಮೀನನ್ನು ಬಳುವಳಿಯಾಗಿ ನೀಡಿತ್ತು. ಇದರ ಜೊತೆಗೆ ಮುರುಳೀಧರ್ ಸಹ ಕೃಷಿಕರಾಗಿದ್ದು, ಸುಮಾರು 150 ಎಕರೆ ಜಮೀನು ಹೊಂದಿದ್ದರು.
ಕೊಲೆಯಾದ ದಂಪತಿಗೆ ಮಕ್ಕಳಿರಲಿಲ್ಲ. ಮುರುಳೀಧರ್ ಸಹೋದರ ಚನ್ನರಾಯಪಟ್ಟಣದಲ್ಲಿ ಖಾಸಗಿ ಶಾಲೆ ನಡೆಸುತ್ತಿದ್ದಾರೆ. ಮಕ್ಕಳಿಲ್ಲದ ಮುರಳೀಧರ್ ಆಸ್ತಿಯ ಮೇಲೆ ಕುಟುಂಬದವರ ಕಣ್ಣಿತ್ತು ಎನ್ನಲಾಗ್ತಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.