ಹಾಸನ: ಕೊರೊನಾ ಲಾಕ್ಡೌನ್ ವೇಳೆ ಕ್ಷುಲ್ಲಕ ಕಾರಣಕ್ಕೆ ಒಂದು ಅಮಾಯಕ ಜೀವವನ್ನು ಬಲಿ ತೆಗೆದುಕೊಂಡು ಆನಂದ ಅಲಿಯಾಸ್ ಶಿವಕುಮಾರ್ (21) ಜೈಲುಸೇರಿದ್ದ. ಜೈಲಿನಿಂದ ಬಂದಿದ್ದ ಆತ ಕ್ಷುಲ್ಲಕ ಕಾರಣದಿಂದ ಇದೀಗ ತಾನೇ ಕೊನೆಯುಸಿರೆಳೆದಿದ್ದಾನೆ.
ಜೈಲಿನಿಂದ ಹೊರ ಬಂದಿದ್ದ ಆನಂದ ಹಬ್ಬದೂಟದ ಸಡಗರದಲ್ಲಿ ಭಾಗಿಯಾಗಿದ್ದ. ಆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೊಂದಿಗೆ ಗಲಾಟೆ ಮಾಡಿಕೊಂಡು ಎದುರಾಳಿಗಳಿಗೆ ಕೊಲೆ ಮಾಡುವ ಬೆದರಿಕೆಯಾಕಿದ್ದನಂತೆ. ಆ ಬೆದರಿಕೆಯೇ ಆತನ ಕೊಲೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಅವಾಜ್ ಹಾಕಿದ ಕಾರಣಕ್ಕೆ ಕೊಲೆಗೆ ಸ್ಕೆಚ್:
ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತರೊಂದಿಗೆ ಗಲಾಟೆ ಮಾಡಿಕೊಂಡು ಕೊಲೆ ಮಾಡುವುದಾಗಿ ಅವಾಜ್ ಹಾಕಿದ್ದ. ಆ ಕಾರಣಕ್ಕೆ ಸಿಟ್ಟಿಗೆದ್ದ ಸ್ನೇಹಿತರು ಈತನನ್ನೇ ಕೊಲೆ ಮಾಡಲು ಸ್ಕೆಚ್ ಹಾಕಿ ಮುಹೂರ್ತ ಫಿಕ್ಸ್ ಮಾಡಿದ್ದರು.
ಚನ್ನರಾಯಪಟ್ಟಣದ ಯುವಕನ ಹತ್ಯೆ ಪ್ರಕರಣ ರಾಜಿ ಮಾಡಿಕೊಳ್ಳುವ ನೆಪದಲ್ಲಿ ಚುಚ್ಚಿ-ಚುಚ್ಚಿ ಕೊಂದರೇ?
ಗಲಾಟೆಯ ರಾಜಿ ಸಂಧಾನ ಮಾಡಿಕೊಳ್ಳುವ ನೆಪದಲ್ಲಿ ಆನಂದನಿಗೆ ಕರೆ ಬಂದಿದ್ದು, ನಂತರ ಕಾರ್ತಿಕ್ ಎಂಬಾತ ಆತನ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಡಿ. ಕಾಳೇನಹಳ್ಳಿ ಮಂಚಿನಕಟ್ಟೆ ಸಮೀಪ ಹೋಗಿದ್ದಾರೆ. ಅಲ್ಲಿ ಸೇರಿದ್ದ ಎಲ್ಲರೂ ಕಂಠಪೂರ್ತಿ ಕುಡಿದ ಬಳಿಕ ಮತ್ತೆ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆಯ ಸಂದರ್ಭದಲ್ಲಿ ಆನಂದ ತನ್ನ ಸ್ನೇಹಿತನೊಬ್ಬನಿಗೆ ಹಲ್ಲೆ ಮಾಡಿದ್ದಾನೆ. ಇದರಿಂದ ಸಿಟ್ಟಾದ ಪುನೀತ್, ಕಾರ್ತಿಕ್, ವಿಜಯ್, ಚೇತನ್ @ಕೆಂದ ಮತ್ತು ಗೌತಮ್ ಎಂಬ ಐದು ಜನ ಸ್ನೇಹಿತರು ಒಟ್ಟಾಗಿ ಆನಂದನ ಎದೆಗೆ ಮತ್ತು ದೇಹದ ಕೆಲವು ಭಾಗಗಳಿಗೆ ತಾವು ತಂದಿದ್ದ ಮಾರಕಾಸ್ತ್ರದಿಂದ ಮನಸೋಇಚ್ಛೆ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಅನುಮಾನಾಸ್ಪದ ಆರೋಪಿಗಳು ಅಂದರ್:
ಈ ಘಟನೆ ಸಂಭವಿಸಿದ ಬಳಿಕ ಗ್ರಾಮಸ್ಥರೊಬ್ಬರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆ, ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ತಕ್ಷಣ ಆನಂದನನ್ನು ಆ್ಯಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದು, ಆರೋಪಿಗಳ ಹುಡುಕಾಟ ಕಾರ್ಯವನ್ನು ರಾತ್ರೋ - ರಾತ್ರಿ ಆರಂಭಿಸಿದ್ದರು. ಅನುಮಾನಾಸ್ಪದ ಮೂರು ವ್ಯಕ್ತಿಗಳನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಚನ್ನರಾಯಪಟ್ಟಣದಲ್ಲಿ ರಾಜಿ ಸಂಧಾನಕ್ಕೆ ಕರೆದು ಯುವಕನ ಹತ್ಯೆ ಶಂಕೆ!
ಅಮಾಯಕನನ್ನು ಕೊಂದಿದ್ದ ಆನಂದ:
ಲಾಕ್ಡೌನ್ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಬಾಗೂರಿನಲ್ಲಿ ಮದ್ಯದಂಗಡಿಗೆ ಮದ್ಯ ತೆಗೆದುಕೊಳ್ಳಲು ಹೋದ ಸಂದರ್ಭದಲ್ಲಿ ಅಂಗಡಿಯ ಕ್ಯಾಶಿಯರ್ ಜೊತೆ ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗೆದು ಆತನ ಮೇಲೆ ಹಲ್ಲೆ ನಡೆಸಿದ್ದ. ಸುಮಾರು 15 ದಿನಕ್ಕೂ ಹೆಚ್ಚು ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಕ್ಯಾಶಿಯರ್ ಪ್ರಮೋದ್ ಕೊನೆಯುಸಿರೆಳೆದಿದ್ದ.
ಜೈಲು ಸೇರಿ ಮೊನ್ನೆ-ಮೊನ್ನೆ ರಿಲೀಸ್ ಆಗಿದ್ದ:
ಪ್ರಮೋದ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆನಂದ ಮೊನ್ನೆ - ಮೊನ್ನೆ ತಾನೇ ಬೇಲ್ ಮೇಲೆ ಹೊರ ಬಂದಿದ್ದ. ಜೈಲಿಗೆ ಹೋಗಿ ಬಂದೆ ಎಂಬ ಒಂದೇ ಕಾರಣಕ್ಕೆ ಕೆಲವರ ಮೇಲೆ ಸುಖಾಸುಮ್ಮನೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುತ್ತಿದ್ದ, ಸಣ್ಣಪುಟ್ಟವರನ್ನು ಹೆದರಿಸಿ ಬೆದರಿಸಿ ಹಣಕ್ಕಾಗಿ ಪೀಡಿಸುತ್ತಿದ್ದ ಎಮದು ತಿಳಿದುಬಂದಿದೆ. ಬಳಿಕ ತನ್ನ ಸ್ನೇಹಿತರ ಜೊತೆ ಸಣ್ಣ ವಿಚಾರಕ್ಕೆ ಮಾಡಿಕೊಂಡ ಜಗಳದಿಂದಾಗಿ ತಾನೇ ಕೊನೆಯುಸಿರೆಳೆದಿದ್ದಾನೆ.
365 ದಿನಗಳಲ್ಲಿ 18 ಕೊಲೆ ಪ್ರಕರಣಗಳು:
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಅಂದರೆ ಜನ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾರಣ ಕಳೆದ ಒಂದು ವರ್ಷ ತುಂಬುವುದರೊಳಗೆ ಸುಮಾರು 17 ಕೊಲೆ ಪ್ರಕರಣಗಳು ದಾಖಲಾಗುವ ಮೂಲಕ ಜನರಿಗೆ ಭಯದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಈ ವರ್ಷದ ಮೊದಲ ಕೊಲೆ ಪ್ರಕರಣ ಇದಾಗಿದ್ದು, ಈವರೆಗೆ ಒಟ್ಟು 18 ಪ್ರಕರಣ(ಕ್ಷುಲ್ಲಕ ಕಾರಣಕ್ಕೆ)ಗಳು ದಾಖಲಾಗಿದೆ.