ಹಾಸನ:ವಾಸ ಮಾಡಲು ಮನೆ, ಸಾಲ ಸೌಲಭ್ಯ, ಸಮುದಾಯ ಭವನ, ರುದ್ರಭೂಮಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚನ್ನರಾಯಪಟ್ಟಣ ತಾಲೂಕಿನ ಪೌರಕಾರ್ಮಿಕರು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಚನ್ನರಾಯಪಟ್ಟಣ ತಾಲೂಕಿನ ಪೌರಕಾರ್ಮಿಕರ ಪ್ರತಿಭಟನೆ - ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಚನ್ನರಾಯಪಟ್ಟಣ ತಾಲೂಕಿನ ಪೌರಕಾರ್ಮಿಕರಿಂದ ಪ್ರತಿಭಟನೆ
ಇಲ್ಲಿನ 25 ಪೌರಕಾರ್ಮಿಕರಿಗೆ ಸ್ವಂತ ನಿವೇಶನವಿದೆ. ಈ ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸರ್ಕಾರದ ಆದೇಶದ ಮೇರೆಗೆ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಸಾಲ ಸೌಲಭ್ಯ ಹಾಗೂ ಎಸ್.ಸಿ/ಎಸ್.ಟಿ.ಯ ಸಾಲ ಸೌಲಭ್ಯ ಪಡೆಯಲು ಸ್ಲಂ ಬೋರ್ಡಿನವರು ಪರಿಚಯ ಪತ್ರ ನೀಡಿ 2 ವರ್ಷಗಳಾದೆ. ಆದರೂ ಪುರಸಭೆಯವರು ಖಾತೆ ಮಾಡಲು ಅವಕಾಶವಿದ್ದರೂ ಕ್ರಮ ಕೈಗೊಂಡಿರುವುದಿಲ್ಲ ಎಂದು ಪ್ರತಿಭಟನಾನಿರತ ಪೌರ ಕಾರ್ಮಿಕರು ದೂರಿದರು.
ಚನ್ನರಾಯಪಟ್ಟಣದಲ್ಲಿರುವ 22 ಖಾಯಂ ಪೌರಕಾರ್ಮಿಕರಿಗೆ ವಾಸ ಮಾಡಲು ಮನೆಗಳಿಲ್ಲ. ಸರ್ಕಾರದ ಸುತ್ತೋಲೆ ಪ್ರಕಾರ, ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ಬಗ್ಗೆ ಕಳೆದ 5 ವರ್ಷಗಳಿಂದಲೂ ತಾಲೂಕು ದಂಡಾಧಿಕಾರಿಗಳು ಮತ್ತು ಪುರಸಭೆಯ ಮುಖ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ.
ಚನ್ನರಾಯಪಟ್ಟಣದ ವಾರ್ಡ್ 22ರ ಅಗ್ರಹಾರ ಬೀದಿ ಅರಳೀಕಟ್ಟೆಯಲ್ಲಿ ಸುಮಾರು 200 ಜನ ಸಂಖ್ಯೆಯುಳ್ಳ ಪೌರ ಕಾರ್ಮಿಕರಿಗೆ ಶುಭ ಸಮಾರಂಭಗಳನ್ನು ಮಾಡಲು ಸಮುದಾಯಭವನದ ಕೊರತೆಯಿದೆ. ವಾರ್ಡ್ 15ರಲ್ಲಿ ಪೌರ ಕಾರ್ಮಿಕರಿಗೆ ಒಂದು ಸಮುದಾಯ ಭವನ ನೀಡಿರುವಂತೆ ಇಲ್ಲಿಯೂ ಕೂಡ ಪೂರ್ಣ ಕಾಮಗಾರಿ ಮಾಡಿಸಿ ಕೊಡಬೇಕು. ಈ ಪಟ್ಟಣದಲ್ಲಿ ಸುಮಾರು 70 ಕಾರ್ಮಿಕರ ಕುಟುಂಬಗಳಿದ್ದು, 400 ಜನ ಸಂಖ್ಯೆಯುಳ್ಳ ಪೌರಕಾರ್ಮಿಕರಿಗೆ ಒಂದು ರುದ್ರಭೂಮಿಯ ವ್ಯವಸ್ಥೆ ಮಾಡಬೇಕು. ಈ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
TAGGED:
Hassan district news