ಹಾಸನ/ಅರಸೀಕೆರೆ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೊನಾ ತನ್ನ ಕಬಂಧಬಾಹುಗಳನ್ನು ಚಾಚುತ್ತಲೇ ಇದೆ. ಇದೀಗ ಶಾಸಕರ ಕುಟುಂಬಕ್ಕೆ ಸೋಂಕು ವಕ್ಕರಿಸಿದೆ.
ಅರಸೀಕೆರೆ ಶಾಸಕ ಶಿವಲಿಂಗೇಗೌಡರ ಪತ್ನಿಗೆ ಸೋಂಕು ದೃಢಪಟ್ಟಿದ್ದು, ಶಾಸಕರು ಸೇರಿದಂತೆ ಅವರ ಕುಟುಂಬದ ಸದಸ್ಯರು ಸ್ವಯಂಪ್ರೇರಣೆಯಿಂದ ಒಂದು ವಾರ ಹೋಂ ಕ್ವಾರಂಟೈನ್‌ನಲ್ಲಿರಲು ನಿರ್ಧರಿಸಿದ್ದಾರೆ.
ಶಾಸಕ ಶಿವಲಿಂಗೇಗೌಡರ ಪತ್ನಿಗೆ ಕೊರೊನಾ ಪಾಸಿಟಿವ್ 4 ದಿನಗಳ ಹಿಂದೆ ನಾನು, ಪತ್ನಿ ಹಾಗೂ ನಮ್ಮ ಕಾರು ಚಾಲಕ ಮತ್ತು ಗನ್‌ಮ್ಯಾನ್ ಎಲ್ಲರೂ ಕೋವಿಡ್-19 ವೈರಸ್ ನ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದೆವು. ಮೊದಲಿಗೆ ನನ್ನ ಪತ್ನಿಗೆ ಮೊದಲು ನೆಗೆಟಿವ್ ವರದಿ ಬಂದಿತ್ತು. ಪುನಃ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಎಂದು ವರದಿ ಬಂದಿದೆ. ತಪಾಸಣೆಗೆ ಒಳಗಾದ ಉಳಿದವರ ವರದಿ ನೆಗೆಟಿವ್ ಬಂದಿದೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.
ಪತ್ನಿಯನ್ನು ಹಾಸನ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ನಾನು ಸ್ವಯಂ ಪ್ರೇರಿತವಾಗಿ ಮನೆಯಲ್ಲಿಯೇ ಇರುತ್ತೇನೆ ಎಂದು ಶಿವಲಿಂಗೇಗೌಡ ಸ್ಪಷ್ಟಪಡಿಸಿದ್ದಾರೆ.