ಹಾಸನ :ರಕ್ಷಣಾ ಸಚಿವರಾಜನಾಥ್ ಸಿಂಗ್ ರಫೆಲ್ ಡೀಲ್ ಮಾಡುವ ವೇಳೆ ವಿಮಾನದ ಚಕ್ರಕ್ಕೆ ನಿಂಬೆಹಣ್ಣು ಕೊಟ್ರಲ್ಲ, ಅವರು ಮಾಟ-ಮಂತ್ರ ಮಾಡಿ ಇಟ್ರಂತಾ..? ಮೊದಲು ಹಿಂದೂಗಳು ಅಂದ್ರೇನು, ಹಿಂದುತ್ವ ಅಂದ್ರೇನು ಎಂಬುದನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿದು ಮಾತನಾಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದಾರೆ.
ಹಿಂದುತ್ವ ಸಂಪ್ರದಾಯದ ಬಗ್ಗೆ ಸಚಿವ ಸೋಮಶೇಖರ್ ತಿಳಿದುಕೊಳ್ಳಲಿ. ಪ್ರತಿ ಗ್ರಾಮಕ್ಕೆ ಹೋದ್ರೂ ಕೂಡ ಅಲ್ಲೇ ನಿಂಬೆಹಣ್ಣನ್ನ ಕೊಡುವ ಸಂಪ್ರದಾಯವಿದೆ. ಹಾಗಂತಾ ನಿಂಬೆಹಣ್ಣನ್ನು ಕೊಟ್ಟವರೆಲ್ಲ ಮಾಟ-ಮಂತ್ರ ಮಾಡಿಸುತ್ತಾರೆ ಅಂತಾ ಅಲ್ಲ.. ಯಾವುದೇ ದೇವಸ್ಥಾನಗಳಿಗೆ ಹೋದ್ರೂ ಅಲ್ಲಿ ಮೊದಲಿಗೆ ನಿಂಬೆಹಣ್ಣನ್ನು ಕೊಡುವುದು ಸಂಪ್ರದಾಯ.
ಶೃಂಗೇರಿ ದೇವಾಲಯವನ್ನು ಹೆಚ್ ಡಿ ರೇವಣ್ಣನವರು ಬಹಳ ನಂಬಿದ್ದಾರೆ. ಅಲ್ಲಿ ನಿಂಬೆಹಣ್ಣು ಕೊಡುತ್ತಾರೆ. ಹಾಗಂತಾ ರೇವಣ್ಣನವರು ಮಾಟ-ಮಂತ್ರ ಮಾಡಿಸುತ್ತಿದ್ದಾರೆ ಅಂತಾ ಹೇಳುವುದಕ್ಕೆ ಆಗುತ್ತಾ? ಅವರಿಗೆ ಹಿಂದುತ್ವದ ಬಗ್ಗೆ ಗೊತ್ತಿಲ್ಲ ಅಂತಾ ಕಾಣಿಸುತ್ತದೆ ಎಂದು ಪ್ರಜ್ವಲ್ ರೇವಣ್ಣ ಸಹಕಾರ ಸಚಿವ ಟಿ ಸೋಮಶೇಖರ್ ಅವರಿಗೆ ಟಾಂಗ್ ಕೊಟ್ಟರು.
ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ ಟಿ ಸೋಮಶೇಖರ್ ಅವರಿಗೆ ಅವರದೇ ಆದ ಸ್ಥಾನಮಾನಗಳಿವೆ. ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ನಾನು ಚಿಕ್ಕವನಾಗಿ ಹೇಳುತ್ತಿರುವೆ ಮುಂದೆ ಇಂತಹ ಮಾತುಗಳನ್ನು ಆಡಬಾರದು. ಬದಲಿಗೆ ರೈತರ ಕಷ್ಟಗಳನ್ನು, ರೈತರಿಗೆ ಆಗಬೇಕಾದ ನೆರವಿನ ಬಗ್ಗೆ ಮಾತನಾಡಲು ರಾಜ್ಯದ ರೈತರು ಕೂಡ ಅವರಿಗೆ ಗೌರವ ಕೊಡುತ್ತಾರೆ. ಇಂತಹ ಮಾತುಗಳಿಂದ ಅವರ ಘನತೆ ಹಾಳು ಮಾಡಿಕೊಳ್ಳುವುದು ಬೇಡ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ನಿಂಬೆಹಣ್ಣಿನ ಆಟ ಹೆಚ್ಚು ದಿನ ನಡೆಯುವುದಿಲ್ಲ: ಸಚಿವ ಸೋಮಶೇಖರ್ ಟಾಂಗ್
ಸಹಕಾರ ಸಚಿವರು ಯೋಚಿಸಿ ಮಾತನಾಡಲಿ. ರೇವಣ್ಣ ಮೊದಲಿಂದಲೂ ಕೂಡ ಧಾರ್ಮಿಕ ಜೀವಿ. ಹಾಸನ ಜಿಲ್ಲೆಯಲ್ಲಿ ನಿಮಗೆ ಯಾವ ಭಾಗಕ್ಕೆ ಹೋದರೂ ದೇವಸ್ಥಾನಗಳು ನಿರ್ಮಾಣವಾಗಿದೆ ಅಂದರೆ ಅದಕ್ಕೆ ಅವರ ಕೊಡುಗೆ ಅಪಾರವಾಗಿದೆ. ದೇವರ ಭಕ್ತರಾಗಿರುವ ರೇವಣ್ಣನವರು ಮಾಟ-ಮಂತ್ರ ಮಾಡುತ್ತಾರೆ ಎನ್ನುವ ಮನಸ್ಥಿತಿಗಳು ಇರುವವರೇ ಇಂತಹ ಮಾತುಗಳನ್ನಾಡುವವರು ಎಂದು ಎಸ್ ಟಿ ಸೋಮಶೇಖರ್ ಅವರ ಮಾತನ್ನು ಅವರಿಗೆ ತಿರುಗಿಸಿದರು.