ಹಾಸನ :ಕೊರೊನಾ ಸಂದರ್ಭದಲ್ಲಿಶಾಲೆ ಆರಂಭಿಸೋದು ಸರ್ಕಾರಕ್ಕೆ ಬಿಟ್ಟ ವಿಷಯ. ಆದರೆ, ಈ ಬಗ್ಗೆ ಸರಿಯಾದ ಮುಂಜಾಗ್ರತೆ ಕೈಗೊಳ್ಳಬೇಕು. ಇಲ್ಲವಾದ್ರೆ ಅದು ಅವೈಜ್ಞಾನಿಕ, ಆತುರದ ನಡೆಯಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಎಲ್ಲವನ್ನೂ ತಿಳಿದು ತರಗತಿ ಆರಂಭಿಸಬೇಕು. ಸರ್ಕಾರ ಕೊರೊನಾ ಬಗ್ಗೆ ಎಷ್ಟು ಗಂಭೀರ ಎಂಬುದು ಮುಖ್ಯ. ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಬಾವಿಗೆ ಧುಮುಕುವುದಾದ್ರೆ ಅದು ಆತ್ಮಹತ್ಯೆ ಮಾಡಿಕೊಂಡಂತಾಗುತ್ತದೆ. ಕೊರೊನಾ ಸೋಂಕಿನ ಲಕ್ಷಣವುಳ್ಳವರು ಮತ್ತು ಸೋಂಕು ಇಲ್ಲದವರ ಬಗ್ಗೆಯೂ ಗಮನ ಹರಿಸಬೇಕು, ಯೋಚಿಸಿ, ಪರಾಮರ್ಶಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಆಡಳಿತ ಪಕ್ಷದವರು ಈ ಬಗ್ಗೆ ನನ್ನ ಸಲಹೆ ಕೇಳಿದ್ದರೆ ಅದನ್ನು ನಾನು ನೀಡುವೆ, ಶಾಲಾ ಆರಂಭದ ವಿಚಾರದಲ್ಲಿ ಅವರ ನಿರ್ಧಾರ ಗೊತ್ತಿಲ್ಲ. ಮುಂಜಾಗ್ರತಾ ವಹಿಸದೇ ತೀರ್ಮಾನ ಕೈಗೊಂಡ್ರೆ, ಅದು ದುಡುಕಿನ ನಿರ್ಧಾರ ತೆಗೆದುಕೊಂಡಂತೆ. ಕೊರೊನಾ ಭಯ ಎಲ್ಲರಿಗೂ ಇದೆ, ಬಡ ಜನರ ಬಗ್ಗೆಯೂ ಚಿಂತನೆ ಮಾಡಬೇಕು. ಆತುರದ ನಿರ್ಧಾರ ಮೂರ್ಖತನವಾಗುತ್ತದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೊನಾ ಸಂದರ್ಭದಲ್ಲಿ ಸುಗ್ರೀವಾಜ್ಞೆ ಮೂಲಕ 3 ಬಿಲ್ ಪಾಸ್ ಮಾಡೋ ಅಗತ್ಯ ಇರಲಿಲ್ಲ. ಸರ್ಕಾರ ಯಾವ ವಿಚಾರದಲ್ಲಿ ವಿಪಕ್ಷಗಳ ಸಲಹೆ, ಸಹಕಾರ ಪಡೆದಿದ್ದಾರೆ ಎಂದು ಪ್ರಶ್ನೆ ಮಾಡಿದ ಅವರು, ಖಾಸಗಿಯವರ ಒತ್ತಡದಿಂದ ಶಾಲಾ-ಕಾಲೇಜು ಆರಂಭಿಸುವುದಕ್ಕೆ ನನ್ನ ವಿರೋಧ ಇದೆ. ಶಾಲಾ, ಕಾಲೇಜುಗಳಿಗೆ ನಿಯಮಾವಳಿ ಹೇಗೆ ಎಂಬುದು ಮೊದಲು ನಿರ್ಧಾರವಾಗಬೇಕು. ಇದನ್ನು ಪರಿಶೀಲಿಸಲು ಕಮಿಟಿ ಮಾಡುತ್ತಾರಾ ಎಂಬುದು ಮೊದಲು ಚರ್ಚೆಯಾಗಬೇಕು ಎಂದರು.