ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಮ ವರ್ಗದ ಕುಟುಂಬಗಳಿಗೆ ಯಾವುದೇ ರೀತಿಯ ಸಂಕಷ್ಟಕ್ಕೆ ನೆರವಾಗುತ್ತಿಲ್ಲ. ಎಂಡಿಆರ್ಎಫ್ ನಿಯಮದ ಅಡಿಯಲ್ಲಿಯೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪರಿಹಾರ ಹಂಚಿಕೆ ಮಾಡಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಆರೋಪಿಸಿದರು.
ಸರ್ಕಾರ ಕೂಡ ಪ್ರತಿ ತಾಲೂಕಿನ ತಹಶೀಲ್ದಾರರಿಗೆ ತಲಾ ಎರಡು ಲಕ್ಷ ರೂ. ನಂತೆ ಹಣ ಬಿಡುಗಡೆ ಮಾಡಿದ್ದು, ಅದು ಕೇವಲ ಕಚೇರಿಯ ಬಳಕೆಗೆ ಮತ್ತು ಸಿಬ್ಬಂದಿಗಳ ಮಾಸ್ಕ್ ಮತ್ತು ಸ್ಯಾನಿಟೈಸರ್ಗೆ ಖರ್ಚು ಮಾಡುತ್ತಿದ್ದಾರೆ. ಇನ್ನುಳಿದಂತೆ ತಾಲೂಕಿನ ಜನರಿಗೆ ಯಾವುದೇ ರೀತಿಯ ಅಗತ್ಯ ವಸ್ತುಗಳ ಖರೀದಿಗೆ ವಿತರಣೆ ಮಾಡಲು ಹಣ ಬಿಡುಗಡೆ ಮಾಡಿಲ್ಲ. ಸ್ಲಮ್ ಮತ್ತು ಕೊಳಚೆ ಪ್ರದೇಶದ ನಿವಾಸಿಗಳಿಗೆ ಪ್ರತಿನಿತ್ಯ ಹಾಲು ನೀಡುವುದನ್ನು ಬಿಟ್ಟರೆ ಇನ್ಯಾವುದೇ ದಿನಸಿ ಮತ್ತು ತರಕಾರಿ ವಸ್ತುಗಳನ್ನು ನೀಡಲು ಮುಂದಾಗದಿರುವುದು ಅವರನ್ನು ಸಂಕಷ್ಟಕ್ಕೆ ದೂಡಿದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಸುಮಾರು 48 ಸಾವಿರ ಮಂದಿ ಹೊರಜಿಲ್ಲೆ ಮತ್ತು ಹೊರರಾಜ್ಯದಿಂದ ಬಂದು ಸಂಕಷ್ಟ ಎದುರಿಸುತ್ತಿದ್ದಾರೆ ಅವರಿಗೂ ಕೂಡ ದಿನಸಿ ಪದಾರ್ಥಗಳನ್ನು ನೀಡಬೇಕು. ಪ್ರತಿ ತಾಲೂಕಿಗೂ ಕನಿಷ್ಠ ಒಂದಾದರೂ ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು. ಪಿಪಿಟಿ ಮಾದರಿಯ ಕಿಟ್ ನೀಡಬೇಕು ಜಿಲ್ಲೆಯಲ್ಲಿ ಕೇವಲ 300 ಲೀಟರ್ ಮಾತ್ರ ಸ್ಯಾನಿಟೈಸರ್ ಖರೀದಿಸಿದೆ. ಆದರೆ, ನಮ್ಮ ಜೆಡಿಎಸ್ ವತಿಯಿಂದ ಈಗಾಗಲೇ ಮೂರರಿಂದ ನಾಲ್ಕು ಸಾವಿರ ಲೀಟರ್ ಖರೀದಿ ಮಾಡಿದ್ದು ಪ್ರತಿ ತಾಲೂಕಿಗೂ ಹಂಚಿಕೆ ಮಾಡಲು ಮುಂದಾಗಿದ್ದೇವೆ. ಇನ್ನು ನಿತ್ಯ ಮಾಧ್ಯಮ ಪ್ರತಿನಿಧಿಗಳು ಕೂಡ ಜೀವದ ಹಂಗುತೊರೆದು ಕೆಲಸ ಮಾಡುತ್ತಿದ್ದು ವಾರ್ತಾ ಇಲಾಖೆಯ ಮೂಲಕ ಅವರಿಗೂ ಕೂಡ ಕಿಟ್ ನೀಡಬೇಕು ಎಂದು ಹೇಳಿದರು.
ಚನ್ನರಾಯಪಟ್ಟಣ ಅರಸೀಕೆರೆಯಲ್ಲಿ ಬೆಳೆಯುವಂತಹ ತರಕಾರಿಗಳನ್ನು ಇತರ ಜಿಲ್ಲೆಗಳಿಗೂ ರಫ್ತು ಮಾಡಲು ಅವಕಾಶ ಕಲ್ಪಿಸಬೇಕು. ಕಾರಣ ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ರಸ್ತೆಯಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ತುಂಬಾ ನೋವಿನ ಸಂಗತಿ. ಇನ್ನು ಬ್ಯಾಂಕ್ ಗಳಿಗೆ ಸರ್ಕಾರ ಅಧಿಕೃತ ಆದೇಶ ವನ್ನು ನೀಡಿ ರೈತರಿಂದ ಮೂರು ತಿಂಗಳು ಯಾವುದೇ ಕಂತುಗಳನ್ನು ಕಟ್ಟಿಸಿ ಕೊಳ್ಳದಂತೆ ಸೂಚನೆ ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು.