ಹಾಸನ:ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಮಗುಚಿ ಬಿದ್ದು, 20 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಈ ಅವಘಡ ಸಂಭವಿಸಿದೆ. ಕೆ ಆರ್ ನಗರ ತಾಲೂಕಿನ ಬೆಟ್ಟದಹಳ್ಳಿಯಿಂದ ಇಬ್ಬಡಿ ವಡ್ಡರಹಳ್ಳಿ ಕಡೆಗೆ ಮದುವೆಯ ಬೀಗರ ಊಟಕ್ಕೆಂದು ಹೊರಟ್ಟಿದ್ದವರನ್ನು ಹೊತ್ತೊಯ್ಯುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಜಮೀನಿಗೆ ವಾಹನ ಉರುಳಿದೆ.
ಅತಿ ವೇಗ ಮತ್ತು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿಗೆ ಉರುಳಿ ಬಿದ್ದಿದೆ. ಟಾಟಾ ಏಸ್ ವಾಹನದಲ್ಲಿ ಇದ್ದ ಕೆಲ ಪ್ರಯಾಣಿಕರು ತಕ್ಷಣ ಹೊರಗೆ ಜಿಗಿದಿದ್ದಾರೆ. ಚಾಲಕ ಸೇರಿ ಮುಂಭಾಗದಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಹಿಂಬದಿಯಲ್ಲಿ ಕುಳಿತಿದ್ದ 20 ಮಂದಿಗೆ ಸಣ್ಣ - ಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗಾಯಾಳುಗಳನ್ನು ಅರಕಲಗೂಡು ಮತ್ತು ಹೊಳೆ ನರಸೀಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.