ಹಾಸನ/ಬೇಲೂರು:ಕರುಗಳನ್ನು ತುಂಬಿಸಿಕೊಂಡುಕಸಾಯಿಖಾನೆಗೆ ತೆರಳುತ್ತಿದ್ದ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, 50ಕ್ಕೂ ಹೆಚ್ಚು ಕರುಗಳು ಸಾವಿಗೀಡಾಗಿರುವ ದಾರುಣ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿಯಲ್ಲಿ ನಡೆದಿದೆ.
ಸುಮಾರು 100ಕ್ಕೂ ಅಧಿಕ ಕರುಗಳನ್ನು ಸಣ್ಣ ವಾಹನವೊಂದರಲ್ಲಿ ಕಳ್ಳ ಮಾರ್ಗದಲ್ಲಿ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ, ಸ್ಥಳದಲ್ಲಿಯೇ 50ಕ್ಕೂ ಹೆಚ್ಚು ಕರುಗಳು ಮೃತಪಟ್ಟಿವೆ. ಇನ್ನುಳಿದ 40ಕ್ಕೂ ಮೇಲ್ಪಟ್ಟು ಕರುಗಳು ಬದುಕುಳಿದಿವೆ.
ಬದುಕುಳಿದ ಕರುಗಳಿಗೆ ಸ್ಥಳೀಯರು ಹಾಲುಣಿಸಿ ಪೋಷಣೆ ಮಾಡಿದ್ದಾರೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಆಗಮಿಸಿ ಚಿಕಿತ್ಸೆ ನೀಡಿದರು. ಬಳಿಕ ಅರಸೀಕೆರೆ ಗೋ ಶಾಲೆ ಮತ್ತು ಮೈಸೂರಿನ ಪಿಂಜರ್ ಪೊಲ್ಗೆ ಕರುಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ದ್ಯಾವಪ್ಪನಹಳ್ಳಿಯಲ್ಲಿ 50ಕ್ಕೂ ಹೆಚ್ಚು ಕರುಗಳು ಸಾವು, ಘಟನೆಯನ್ನು ವಿವರಿಸಿದ ಶಾಸಕ ಲಿಂಗೇಶ್ ಪ್ರತ್ಯಕ್ಷ ವರದಿ ನೀಡಿದ ಶಾಸಕಕೆ.ಎಸ್.ಲಿಂಗೇಶ್
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಕೆ.ಎಸ್.ಲಿಂಗೇಶ್, ಘಟನೆ ಕುರಿತು ಮಮ್ಮಲ ಮರುಗಿದರು. ತಮ್ಮ ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ಮುಖೇನ ಘಟನೆಯನ್ನು ವಿವರಿಸಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
'ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದರೂ ಕೂಡ ಗೋಹತ್ಯೆ ಇನ್ನೂ ನಿಂತಿಲ್ಲ. ಪ್ರತಿ ಹೋಬಳಿಗೆ ಒಂದರಂತೆ ಗೋ ಶಾಲೆ ತೆರೆಯುತ್ತೇವೆಂದು ಹೇಳುತ್ತಾರೆ. ಆದ್ರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಕೂಡಲೇ ಇಂತಹ ಕೃತ್ಯವೆಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು'.
- ಶಾಸಕ ಕೆ.ಎಸ್.ಲಿಂಗೇಶ್
ರೈತರು ಹೇಳುವುದೇನು?
ನಾವು ಹಲವು ಬಾರಿ ಸಭೆಗಳಲ್ಲಿ ಗೋಶಾಲೆ ತೆರೆಯಿರಿ ಎಂದು ಮನವಿ ಮಾಡಿದ್ದೇವೆ. ಆದ್ರೆ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ. ಇಂತಹ ಘಟನೆಗಳು ನಿಲ್ಲಬೇಕಾದ್ರೆ ಗೋಶಾಲೆ ತೆರೆಯುವುದೇ ಉತ್ತಮ ಮಾರ್ಗ ಎಂದು ರೈತರು ಹೇಳುತ್ತಾರೆ.