ಹಾಸನ :ಕೊರೊನಾ ಲಾಕ್‌ಡೌನ್ ನಂತರ ಆರ್ಥಿಕ ಸಂಕಷ್ಟದ ಕಾರಣಗಳಿಂದ ಪೋಷಕರು ಅನುದಾನರಹಿತ ಶಾಲೆಗಿಂತ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಮುಂದೆ ಬರುತ್ತಿದ್ದಾರೆ ಎಂದು ಡಿಡಿಪಿಐ ಪ್ರಕಾಶ್ ತಿಳಿಸಿದ್ದಾರೆ.
ಈ ಬಾರಿ ಅನುದಾನರಹಿತ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಿಗೆ ಹೆಚ್ಚು ದಾಖಲಾತಿ ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಈಗಾಗಲೇ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದ ಸಾವಿರಕ್ಕೂ ಹೆಚ್ಚು ಪೋಷಕರು ಖಾಸಗಿ ಶಾಲೆಯಿಂದ ವಾಪಸ್ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಪ್ರತಿವರ್ಷ ಸರ್ಕಾರಿ ಶಾಲೆಗಳಿಗಿಂತಲೂ ಅನುದಾನರಹಿತ ಶಾಲೆಗಳ ದಾಖಲಾತಿ ಸಂಖ್ಯೆ ಹೆಚ್ಚಿರುತ್ತಿತ್ತು. ಈ ವರ್ಷ ಒಂದರಿಂದ ಹತ್ತನೇ ತರಗತಿಯವರೆಗೆ ಇದುವರೆಗೂ ಆಗಿರುವ ದಾಖಲಾತಿಯನ್ನು ನೋಡಿದರೆ, ಅನುದಾನರಹಿತ ಶಾಲೆಗಿಂತ ಸರ್ಕಾರಿ ಶಾಲೆಗೆ ದಾಖಲಾಗಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದರು.
ಕಳೆದ ವರ್ಷ ಹಾಸನ ಜಿಲ್ಲೆಯಲ್ಲಿ ಎಲ್‌ಕೆಜಿಯಿಂದ ಹತ್ತನೇ ತರಗತಿಯವರೆಗೆ 2 ಲಕ್ಷದ 29 ಸಾವಿರದ 607 ಮಕ್ಕಳು ದಾಖಲಾಗಿದ್ದರು. ಅದರಲ್ಲಿ 95 ಸಾವಿರದ 20 ಮಕ್ಕಳು ಸರ್ಕಾರಿ ಶಾಲೆಗೆ ಸೇರಿದರೆ, ಸರ್ಕಾರಿ ಅನುದಾನಿತ ಶಾಲೆಗೆ 25,628 ಮಕ್ಕಳು ಸೇರಿದ್ದರು. ಖಾಸಗಿ ಶಾಲೆಗೆ 98,475 ಮಕ್ಕಳು ಸೇರಿದ್ದರು. ಅಂದರೆ ಸರ್ಕಾರಿ ಶಾಲೆಗಿಂತ ಹೆಚ್ಚಾಗಿ ಅನುದಾನ ರಹಿತ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಈ ವರ್ಷ ಎಲ್‌ಕೆಜಿಯಿಂದ ಹತ್ತನೇ ತರಗತಿವರೆಗೆ 1 ಲಕ್ಷದ 63,373 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅವರಲ್ಲಿ 77,661 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ದಾಖಲಾಗಿದ್ದು, ಸರ್ಕಾರಿ ಅನುದಾನಿತ ಶಾಲೆಗೆ 21,285 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅನುದಾನ ರಹಿತ ಶಾಲೆಗಳಿಗೆ 57,432 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಅನುದಾನ ರಹಿತ ಶಾಲೆಗಳಿಗೆ ಹೋಲಿಸಿದರೆ ಈ ವರ್ಷ ಸರ್ಕಾರಿ ಶಾಲೆಯ ದಾಖಲಾತಿ ಸಂಖ್ಯೆ ಸುಮಾರು 20 ಸಾವಿರದಷ್ಟು ಹೆಚ್ಚಿದೆ. ಅಷ್ಟೇ ಅಲ್ಲ, ಒಂದನೇ ತರಗತಿಗೆ ಈ ವರ್ಷ ದಾಖಲಾಗಿರುವ ವಿದ್ಯಾರ್ಥಿಗಳ ಅಂಕಿ ಅಂಶದಲ್ಲೂ ಸರ್ಕಾರಿ ಶಾಲೆ ಮುಂದಿದೆ. ಲಾಕ್‌ಡೌನ್ ನಂತರ ಹಾಸನದಲ್ಲಿ ಸರ್ಕಾರಿ ಶಾಲೆಯ ದಾಖಲಾತಿ, ಅನುದಾನರಹಿತ ಶಾಲೆಯ ದಾಖಲಾತಿಗಿಂತ ಹೆಚ್ಚಾಗಿದೆ. ಪೋಷಕರು ಸರ್ಕಾರಿ ಶಾಲೆಗಳ ಮೇಲೆ ಇಟ್ಟಿರುವ ನಂಬಿಕೆಯನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದರು.