ಹಾಸನ:ಬೇಲೂರು ತಾಲೂಕಿನ ನಂಜಗೋಡನಹಳ್ಳಿ ಕಾಫಿ ತೋಟದಲ್ಲಿ ಮಂಗವೊಂದು ಮೃತಪಟ್ಟಿದ್ದರಿಂದ ಸ್ಥಳೀಯರಲ್ಲಿ ಮಂಗನ ಕಾಯಿಲೆ ಬಗ್ಗೆ ಆತಂಕ ಸೃಷ್ಠಿಯಾಗಿದೆ.
ಕಾಫಿ ತೋಟದಲ್ಲಿ ಮಂಗ ಸಾವು: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಕಾಫಿ ತೋಟದಲ್ಲಿ ಮಂಗವೊಂದು ಮೃತಪಟ್ಟಿದ್ದರಿಂದ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯಲ್ಲಿ ಆತಂಕ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಪ್ರದೀಪ್ ಶೆಟ್ಟಿ ಎಂಬುವರ ಕಾಫಿ ತೋಟದಲ್ಲಿ ಮಂಗ ಮೃತಪಟ್ಟಿದ್ದು, ಇದರಿಂದ ಹೋಬಳಿ ಜನ ಆತಂಕದಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ತೋಟದ ಮಾಲೀಕರು, ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರಿಂದ ಪಟ್ಟಣದ ಪಶು ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಮೃತ ಮಂಗದ ಮರಣೋತ್ತರ ಪರೀಕ್ಷೆ ನಡೆಸಿದರು. ಮಂಗನ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಲು ಅಂಗಾಂಗಗಳನ್ನು ಶಿವಮೊಗ್ಗದ ಕ್ರಿಮಿ ಸಂಶೋಧನಾಲಯಕ್ಕೆ ರವಾನಿಸಲಾಯಿತು.
ಮೃತಪಟ್ಟ ಮಂಗನ 50 ಮೀಟರ್ ವ್ಯಾಪ್ತಿಗೆ ಮೆಲಾಥಿಯನ್ ದ್ರಾವಣ ಸಿಂಪಡಿಸಿ ಮಂಗವನ್ನು ಕಟ್ಟಿಗೆಗಳಿಂದ ಸುಟ್ಟು ಹಾಕಿದರು. ಮರಣೋತ್ತರ ಪರೀಕ್ಷಾ ವೇಳೆ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಯಾದ ಶಿವಣ್ಣ, ಸತೀಶ್, ನಿಂಗೇಗೌಡ, ಪಶು ವೈದ್ಯಾಧಿಕಾರಿ ಡಾ. ಗಂಗಾಧರ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಇದ್ದರು.