ಹಾಸನ:ಮತದಾನದ ದಿನಾಂಕ ಹತ್ತಿರ ಬರುತ್ತಿದ್ದಂತೆ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಇಂದು ರೇವಣ್ಣ ವಿಧಾನಸಭಾ ಕ್ಷೇತ್ರವಾದ ಹೊಳೆನರಸೀಪುರದಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅಬ್ಬರದ ಪ್ರಚಾರ ನಡೆಸಿದ್ದಾರೆ.
ಚುನಾವಣೆ ಬಂದರೆ ಸಾಕು ದೇವೇಗೌಡರ ಕುಟುಂಬ ಮೊದಲ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸುವುದು ಮೂಡಲಹಿಪ್ಪೆಯಿಂದ. ಇವತ್ತು ಎ.ಮಂಜು ಕೂಡ ಹೊಳೆನರಸೀಪುರ ಪಟ್ಟಣದ ಮೂಡಲ ಹಿಪ್ಪೆಯ ಶ್ರೀ ಚೆನ್ನಿಗರಾಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಪ್ರಚಾರವನ್ನು ಆರಂಭಿಸಿದರು. ಮೂಡಲಹಿಪ್ಪೆಯಿಂದ ಕಲ್ಲು ಬ್ಯಾಡ್ರಳ್ಳಿ, ಐಚನಹಳ್ಳಿ ಅಗ್ರಹಾರ, ವಡ್ಡರಹಳ್ಳಿ, ಎಲೆ ಚಾಕನಹಳ್ಳಿ ಸೇರಿದಂತೆ ಹತ್ತಕ್ಕು ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಮತಬೇಟೆ ಮಾಡಿದರು. ಅಲ್ಲದೆ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಉದ್ಯಮಿಯಾಗಿದ್ದ ದಿವಂಗತ ಶಿವಸ್ವಾಮಿ ಅವರ ಮನೆಗೆ ಭೇಟಿ ಕೊಟ್ಟು ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಬಳಿಕ ಪಟ್ಟಣದ ಹೊರ ಭಾಗದಲ್ಲಿರುವ ಅಂಬೇಡ್ಕರ್ ನಗರಕ್ಕೆ ಭೇಟಿ ಕೊಟ್ಟು ಅಲ್ಲಿನ ಕೆಲವು ಜೆಡಿಎಸ್ ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡರು. ಇದಲ್ಲದೆ ದಲಿತರ ಕಾಲೋನಿ ಮತ್ತು ಅಂಬೇಡ್ಕರ್ ನಗರ ಎರಡು ಭಾಗದಲ್ಲಿ ಕಾಲ್ನಡಿಗೆ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಬಿಜೆಪಿ ಅಭ್ಯರ್ಥಿ ಎ.ಮಂಜು ಅಬ್ಬರದ ಪ್ರಚಾರ ಮಂಜು ಕಾಂಗ್ರೆಸ್ನಲ್ಲಿ ಇದ್ದವನು ಬಿಜೆಪಿಗೆ ಬಂದಿದ್ದಾನೆ. ಅವರಿಗೆ ಮತ ಕೊಡುವುದು ಹೇಗೆ ಎಂಬ ಚಿಂತೆ ಬೇಡ. ನಾನು ಮೊದಲಿಂದಲೂ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದವನು. ಇವತ್ತು ಜೆಡಿಎಸ್ - ಕಾಂಗ್ರೆಸ್ ಒಂದಾಗಿರುವುದರಿಂದ ನಾನು ಕುಟುಂಬ ರಾಜಕಾರಣವನ್ನು ವಿರೋಧಿಸಬೇಕಾದರೆ ಮತ್ತೊಂದು ಪಕ್ಷವನ್ನು ಸೇರಲೇಬೇಕು. ಇಲ್ಲವಾದರೆ ಮತ್ತೆ ಇನ್ನು ಐವತ್ತು ವರ್ಷ ನಾವೆಲ್ಲರೂ ಕುಟುಂಬ ರಾಜಕಾರಣದ ಜೀತದಾಳಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದರು.
ಮೈತ್ರಿ ಪಕ್ಷದವರು ಬಿಜೆಪಿಯನ್ನು ಕೋಮುವಾದಿ ಅಂತ ಜರಿಯುತ್ತಿದ್ದಾರೆ. ಆದರೆ ಇವತ್ತು ಮೋದಿ ಸರ್ಕಾರ ರಚನೆಯಾದ ಮೇಲೆ ಒಬ್ಬ ದಲಿತ ಮುಖಂಡನನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಮುನ್ನೂರಕ್ಕೂ ಅಧಿಕ ದಲಿತ ಶಾಸಕರು ಇರುವುದು ನಮ್ಮ ಬಿಜೆಪಿಯಲ್ಲೇ. ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸಂವಿಧಾನವನ್ನು ತಿದ್ದುಪಡಿ ಮಾಡಿ ಬಿಡುತ್ತಾರೆ ಅಂತ ಕಾಂಗ್ರೆಸ್ನವರು ಭಾಷಣದಲ್ಲಿ ಹೇಳ್ತಾರೆ. ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ಒಬ್ಬ ಹಿಂದುಳಿದ ವರ್ಗದ ಮುಖಂಡರಾದ ಮೋದಿ ತಿದ್ದುಪಡಿ ಮಾಡಲು ಸಾಧ್ಯವೇ ನೀವೇ ಯೋಚಿಸಿ ಎಂದು ಸಿದ್ದರಾಮಯ್ಯ ಬಾಣಾವರದಲ್ಲಿ ಹೇಳಿದ ಮಾತಿಗೆ ತಿರುಗೇಟು ನೀಡಿದರು.