ಹಾಸನ: ನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯ್ತಿಗಳ ಕಸ ವಿಲೇವಾರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ ಅಗತ್ಯವಿದ್ದು, ಅಗಿಲೆಯಲ್ಲಿ ಪ್ರಾಯೊಗಿಕವಾಗಿ ಇದನ್ನು ಪ್ರಾರಂಭಿಸುವಂತೆ ಶಾಸಕ ಪ್ರೀತಂ ಜೆ ಗೌಡ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಕಸ ವಿಂಗಡಣೆ ಮತ್ತು ವಿಲೇವಾರಿ ಹೊಸ ತಂತ್ರಜ್ಞಾನ ಬಳಕೆ ಕುರಿತು ಚರ್ಚೆ ನಡೆಸಲಾಯಿತು.
ಕಸ ವಿಲೇವಾರಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಆಧುನಿಕ ತಂತ್ರಜ್ಞಾನ ಅಗತ್ಯ: ಶಾಸಕ ಪ್ರೀತಂ ಜೆ ಗೌಡ ಪ್ರತಿಪಾದನೆ ಈ ವೇಳ ಮಾತನಾಡಿದ ಟ್ರಾಶ್‌ಕಾನ್ ಸಂಸ್ಥೆಯ ಸಿಇಒ ನಿವೇಧ ಮಾತನಾಡಿ, ಹಸಿ ಹಾಗೂ ಒಣ ಕಸಗಳ ವರ್ಗೀಕರಣ ಮತ್ತು ಅದನ್ನು ಜೈವಿಕ ಗೊಬ್ಬರ,ಜೈವಿಕ ಇಂಧನ ಹಾಗೂ ಇತರ ಉಪ ಉತ್ಪನ್ನಗಳನ್ನಾಗಿ ಪರಿವರ್ತಿಸಿ, ಬಳಸುವ ಬಗೆ ಹಾಗೂ ಅದಕ್ಕೆ ತಮ್ಮ ಸಂಸ್ಥೆಯಲ್ಲಿರುವ ಯಾಂತ್ರಿಕ ಸಲಕರಣೆಗಳ ಬಗ್ಗೆ ವಿವರಿಸಿದರು.
ಶಾಸಕ ಪ್ರೀತಂ ಜೆ ಗೌಡ ಮಾತನಾಡಿ, ನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯ್ತಿಗಳ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರಗಳನ್ನು ಕೈಗೊಳ್ಳಬೇಕಿದೆ. ಇದಕ್ಕಾಗಿ ಸ್ವಚ್ಛ ಭಾರತ್ ಯೋಜನೆಯಡಿ ಜಿಲ್ಲಾ ಪಂಚಾಯ್ತಿಯಲ್ಲಿ 5.15 ಕೋಟಿ ರೂಪಾಯಿ ಲಭ್ಯವಿದೆ ಎಂದರು. ಇದಲ್ಲದೇ, ಪ್ರತಿ ಗ್ರಾಮ ಪಂಚಾಯ್ತಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ತಲಾ 20 ಲಕ್ಷ ರೂಪಾಯಿಗಳನ್ನ ಕೇಂದ್ರ ಸರ್ಕಾರ ಒದಗಿಸುತ್ತದೆ. ಇದನ್ನ ಒಟ್ಟು ಸೇರಿಸಿ ಅಗಿಲೆಯಲ್ಲಿ ಸಮಗ್ರ ಕಸವಿಲೇವಾರಿ ವ್ಯವಸ್ಥೆ ಮಾಡಬಹುದು ಅಥವಾ ಐದಾರು ಗ್ರಾಮ ಪಂಚಾಯ್ತಿಗಳನ್ನ ಸೇರಿಸಿ ಒಂದೊಂದು ವ್ಯವಸ್ಥಿತ ಘಟಕ ಸ್ಥಾಪಿಸಬಹುದಾಗಿದೆ ಎಂದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಮೊದಲಿಗೆ ಜಿಲ್ಲೆಯ ಅಧಿಕಾರಿಗಳ ತಂಡ ಬೆಂಗಳೂರಿಗೆ ತೆರಳಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಕಸವಿಲೇವಾರಿ ಯಂತ್ರಗಳು ಮತ್ತು ಅದರ ಕಾರ್ಯಕ್ಷಮತೆ ಮತ್ತು ಹಾಸನ ನಗರಕ್ಕೆ ಇದರಿಂದಾಗಬಹುದಾದ ಅನುಕೂಲಗಳನ್ನು ಪರಿಶೀಲಿಸಿ ಬರುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಅಧಿಕಾರಿಗಳ ಭೇಟಿ ನಂತರ ಅವರ ಅಭಿಪ್ರಾಯ ಆಧರಿಸಿ ಮೊದಲಿಗೆ ಒಂದೆರಡು ಸಲಕರಣೆಗಳನ್ನು ಅಳವಡಿಸಿ ಅದರ ಫಲಶೃತಿ ಪರಿಶೀಲಿಸಿ ಇತರ ಯಾಂತ್ರಿಕ ಅಳವಡಿಕೆಗೆ ನಿರ್ಧಾರ ಮಾಡಬಹುದಾಗಿದೆ ಎಂದರು.
ಚರ್ಚೆಯಲ್ಲಿ ಜನವರಿನ 28 ರಂದು ಬಿಬಿಎಂಪಿಗೆ ಅಧಿಕಾರಿಗಳ ತಂಡ ಭೇಟಿ ಮಾಡಿ ಪರಿಶೀಲಿಸಲು ಸಂಸ್ಥೆಯಲ್ಲಿ ತೀರ್ಮಾನಿಸಲಾಯಿತು.