ಹಾಸನ: 14 ಮಂದಿ ಶಾಸಕರನ್ನು ಅನರ್ಹ ಮಾಡಿ ಸ್ಪೀಕರ್ ತೆಗೆದುಕೊಂಡಿರೋ ನಿರ್ಧಾರ ಸ್ವಾಗತಾರ್ಹ. ಮುಂದಿನ ದಿನದಲ್ಲಿ ಅನರ್ಹಗೊಂಡಿರುವ ಶಾಸಕರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ಹಣ, ಅಧಿಕಾರಕ್ಕಾಗಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಹಣ ಪಡೆದು ಬೇರೆ ಪಕ್ಷಕ್ಕೆ ಹೋಗೋದು ತಪ್ಪು. ಇನ್ನು ಆರು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಜನರು ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ ಸಂಸದ ಪ್ರಜ್ವಲ್ ರೇವಣ್ಣ, ಸಮ್ಮಿಶ್ರ ಸರ್ಕಾರ ಪತನಕ್ಕೆ ತಂದೆ ರೇವಣ್ಣ ಕಾರಣ ಎಂಬ ಆರೋಪವನ್ನ ತಳ್ಳಿಹಾಕಿದರು. ಲೋಕೋಪಯೋಗಿ ಇಲಾಖೆಯಲ್ಲಿ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ ಎಂದರು. ಸದ್ಯಕ್ಕೆ ಬಿಜೆಪಿ ಅವರು ಸರ್ಕಾರ ರಚನೆ ಮಾಡಿದ್ದಾರೆ. ಸರ್ಕಾರ ಎಷ್ಟು ದಿನ ನಡೆಸುತ್ತಾರೋ ನೋಡೋಣ. ಅದರಲ್ಲಿಯು ಕೂಡ ಸಮಸ್ಯೆ ಇಲ್ಲದೇ ಇರಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಹಾಗೆಯೇ ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಅಫಿಡವಿಟ್ ಪ್ರಕರಣದ ಬಗ್ಗೆ ನನಗೆ ನ್ಯಾಯಾಲಯದಿಂದ ಯಾವುದೇನೋಟಿಸ್ ಬಂದಿಲ್ಲ. ಬಂದರೆ ಖಂಡಿತಾ ಅದರ ಬಗ್ಗೆ ತಮಗೆ ಮಾಹಿತಿ ನೀಡುತ್ತೇನೆ ಎಂದರು