ಹಾಸನ: ನನಗೆ ಟೆನ್ಶನ್ ಕೊಡ್ತಿರೋದು ಯಾಕೆ ಗೊತ್ತಾ? ಶಿವಲಿಂಗೇಗೌಡನ ಹೆಣ ಇರೋತನಕ ಬೇರೆ ಯಾವ ವ್ಯಕ್ತಿ ಕೂಡ ಇಲ್ಲಿ ಎಂಎಲ್ಎ ಆಗಲ್ಲ ಅಂತ ಕೋಡಿಮಠದ ಶ್ರೀಗಳು ಹೇಳಿದ್ರಲ್ಲ. ಯಾಂಗಾರ ಮಾಡಿ ಇವನಿಗೆ ಟೆನ್ಶನ್ ಕೊಟ್ರೆ ಸಣ್ಣ ಆಗಿ ಸತ್ತೋಗ್ ಬಿಡುತ್ತಾನೆ. ಆಮೇಲೆ ನಾವು ಎಂಎಲ್ಎ ಆಗಬಹುದು ಎನ್ನುವುದು ಅವರ ಪ್ಲಾನು ಅಂತ ರಾಜಕೀಯ ಮುಖಂಡರೊಬ್ಬರ ವಿರುದ್ಧ ಹೆಸರು ಪ್ರಸ್ತಾಪಿಸದೆ ಶಾಸಕ ಶಿವಲಿಂಗೇಗೌಡ ಟೀಕಿಸಿದ ಪರಿ ಇದು.
ನನ್ನ ಮೇಲೆ ಕಳಿಸಿಬಿಟ್ಟರೆ ಎಂಎಲ್ಎ ಆಗಬಹುದೆಂಬ ಪ್ಲಾನು ಆ ಗಿರಾಕಿಯದ್ದು - ಶಾಸಕ ಶಿವಲಿಂಗೇಗೌಡ - ಎನ್.ಆರ್.ಸಂತೋಷ್
ಶಿವಲಿಂಗೇಗೌಡನಿಗೆ ಟೆನ್ಷನ್ ಕೊಟ್ಟು ಬೇಗ ಮೇಲೆ ಕಳಿಸಿದರೆ ಬಳಿಕ ತಾವು ಎಂಎಲ್‌ಎ ಆಗಬೇಹುದೆಂಬ ಪ್ಲಾನು ಅವರದ್ದು ಎಂದು ರಾಜಕೀಯ ಮುಖಂಡರೊಬ್ಬರ ವಿರುದ್ಧ ಶಾಸಕ ಶಿವಲಿಂಗೇಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಅರಸೀಕೆರೆ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಾತಿಭೇದವಿಲ್ಲದೆ ಒಂದಾಗಿದ್ದ ಅರಸೀಕೆರೆಯಲ್ಲಿ ಈಗ ಒಂದು ಕುತಂತ್ರ ರಾಜಕಾರಣ ಬಂದಿದೆ. ಹೇಗಾದರೂ ಮಾಡಿ ಶಿವಲಿಂಗೇಗೌಡನಿಗೂ ದೇವೇಗೌಡರ ಕುಟುಂಬಕ್ಕೂ ಬೆಂಕಿ ಹಚ್ಚಿ ಎರಡು ಭಾಗ ಮಾಡಿ ಜೆಡಿಎಸ್ ಪಕ್ಷದಿಂದ ನನ್ನ ಕೈ ಬಿಡಿಸಬೇಕು ಎಂಬ ಹುನ್ನಾರ ನಡೆಯುತ್ತಿದೆ ಎಂದು ಗುಡುಗಿದರು.
ಸ್ವಲ್ಪ ಟೆನ್ಶನ್ ಕೊಟ್ಟರೆ ಸಣ್ಣ ಆಗಿ ಬಿಡ್ತಾನೆ:
ಶಿವಲಿಂಗೇಗೌಡನಿಗೆ ಟೆನ್ಷನ್ ಕೊಡಬೇಕು. ಅವನು ದಿನದಿನ ಸಣ್ಣ ಆಗುತ್ತಿದ್ದಾನೆ. ಸ್ವಲ್ಪ ಟೆನ್ಶನ್ ಕೊಟ್ಟರೆ ಇನ್ನೂ ಸಣ್ಣ ಆಗಿ ಬಿಡ್ತಾನೆ. ಆಮೇಲೆ ಶಿವಲಿಂಗೇಗೌಡನನ್ನ ಮೇಲಕ್ಕೆ ಕಳುಹಿಸಿಬಿಟ್ಟು ನಾವು ಎಂಎಲ್ಎ ಆಗಬಹುದಲ್ಲ ಅನ್ನೋದು ಇವರ ಕುತಂತ್ರ. ಅದಕ್ಕಾಗಿ ಒಬ್ಬ ಗಿರಾಕಿ ಕಾದು ಕುಳಿತಿದ್ದಾನೆ ಎಂದು ಹೆಸರನ್ನು ಪ್ರಸ್ತಾಪಿಸದೆ ಟೀಕಾಪ್ರಹಾರ ಮಾಡಿದರು.
ಅಂಚೆ ಕೊಪ್ಪಲಿನಲ್ಲಿ ಕೆರೆ ತುಂಬಿ ಕೋಡಿ ಹರಿದಿತ್ತು. ಅದಕ್ಕೆ ಬಾಗಿನ ಬಿಡುವ ಕಾರ್ಯವನ್ನು ಸ್ಥಳೀಯ ಶಾಸಕ ಮಾಡಬೇಕು. ಆದರೆ ಶಾಸಕನನ್ನು ಕರೆಯದೆ ಕೆರೆಯ ಹಿಂಬದಿಯಿಂದ ಹೋಗಿ ಬಾಗಿನ ಬಿಟ್ಟು ಹೋಗಿದ್ದಾರೆ. ಅರಸೀಕೆರೆಯಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ ಅಂತ ಅಂದುಕೊಂಡು ಬಿಟ್ಟಿದ್ದಾರೆಯೇ? ಹದಿನೈದು ವರ್ಷಗಳ ಕಾಲ ಅರಸೀಕೆರೆ ಜನತೆ ಮೇಲೆ ಜಾತಿ ಸಂಘರ್ಷದ ಪ್ರಕರಣ ದಾಖಲಾಗಿಲ್ಲ. ಅಂತಹ ತಾಲೂಕನ್ನ ಇಬ್ಭಾಗ ಮಾಡಿ ಜನರ ನಡುವೆ ಹೊಡೆದಾಡುವಂತಹ ಕೆಲಸಕ್ಕೆ ಕೈ ಹಾಕಿ ಅಶಾಂತಿ ಉಂಟು ಮಾಡುತ್ತಿದ್ದೀರಿ. ನಿಮ್ಮ ಇತಿಹಾಸ ಎಲ್ಲರಿಗೂ ಗೊತ್ತಿದೆ. ಅರಸೀಕೆರೆ ಇತಿಹಾಸವನ್ನು ಯಾರೂ ಮರೆಯಿಸಲು ಸಾಧ್ಯವಾಗುವುದಿಲ್ಲ ಎಂದರು.