ಹಾಸನ: ಹಿಮ್ಸ್‌ನ ಕೊರೊನಾ ವಾರಿಯರ್ಸ್ಗೆ ಸನ್ಮಾನ - corona worriors
ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಹಾಸನದ ಹಿಮ್ಸ್ ಆಸ್ಪತ್ರೆಯ 72 ಕೊರೊನಾ ವಾರಿಯರ್ಸ್ಗೆ ಶಾಸಕ ಪ್ರೀತಂ ಜೆ. ಗೌಡ ಸನ್ಮಾನ ಮಾಡಿ ಗೌರವಿಸಿದ್ರು.
ಹಾಸನ:ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ನಗರ ಬಿಜೆಪಿ ಮಂಡಲದ ವತಿಯಿಂದ ಹಿಮ್ಸ್‌ನ 72 ಮಂದಿ ಕೊರೊನಾ ವಾರಿಯರ್ಸ್ಗೆ ಶಾಸಕ ಪ್ರೀತಮ್ ಜೆ. ಗೌಡ ಸನ್ಮಾನಿಸಿದ್ರು.
ನಗರದ ಮೆಡಿಕಲ್ ಕಾಲೇಜು ಆವರಣದಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾ ಮಹಾಮಾರಿ ಆವರಿಸಿದ ಮೇಲೆ ಮನುಷ್ಯರು ತನ್ನ ಆರೋಗ್ಯದ ಕಾಪಾಡಿಕೊಳ್ಳುವುದರ ಜೊತೆಗೆ ಪಕ್ಕದ ಮನೆಯವರು, ಸಮಾಜದ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದಾರೆ. ಹಾಸನದಿಂದ , ಕರ್ನಾಟಕ ಮತ್ತು ದೇಶದಿಂದಲೇ ಕೊರೊನಾ ಹೋಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುವ ಸಂದರ್ಭ ನಮ್ಮಲ್ಲಿ ಬರುತ್ತಿದೆ ಎಂದರು.
ಎಲ್ಲರೂ ಸ್ವಾರ್ಥದಿಂದ ಬದುಕಿದ್ದ ವೇಳೆ ಕೊರೊನಾದಿಂದ ಪಾಠ ಕಲಿತು ಉತ್ತಮ ಭಾವನೆ ವ್ಯಕ್ತವಾಗುತ್ತಿದೆ. ಕೊರೊನಾ ಬಂದವರಿಗೆ ಚಿಕಿತ್ಸೆ ಕೊಡುವಲ್ಲಿ ಕೊರೊನಾ ವಾರಿಯರ್ಸ್‌ಗಳ ಸೇವೆ ಶ್ಲಾಘನೀಯವಾಗಿದ್ದು, ಅವರನ್ನು ನಾವು ನೆನಪಿಸಿಕೊಂಡು ಸನ್ಮಾನ ಮಾಡುತ್ತಿರುವುದಾಗಿ ಹೇಳಿದರು.
ಮೆಡಿಕಲ್ ಕಾಲೇಜಿನ ನಿರ್ದೇಶಕ ಬಿ.ಸಿ. ರವಿಕುಮಾರ್ ಮಾತನಾಡಿ, ಸಾಂಕೇತಿಕವಾಗಿ 72 ಮಂದಿ ಕೊರೊನಾ ವಾರಿಯರ್ಸ್‌ಗಳನ್ನು ಆಯ್ಕೆ ಮಾಡಿ ಸನ್ಮಾನಿಸಲಾಗುತ್ತಿದ್ದು, ಉಳಿದವರು ಶ್ರದ್ಧೆಯಿಂದ ಕೆಲಸ ಮಾಡುತ್ತಿಲ್ಲವೇ ಎಂಬ ಭಾವನೆ ಬರುವುದು ಬೇಡ. ಶತಮಾನದಲ್ಲಿ ಕಾಣದಂತಹ ಕೊರೊನಾ ಎಂಬ ಮಹಾಮಾರಿ ಆವರಿಸಿ ಸಂಕಷ್ಟ ಎದುರಿಸಲಾಗುತ್ತಿದೆ ಎಂದರು.
ಮೆಡಿಕಲ್ ಕಾಲೇಜಿನ ಈಶ್ವರ್ ಪ್ರಸಾದ್, ಪ್ರಸನ್ನಕುಮಾರ್, ದೀಪಿಕಾ, ಕೃಷ್ಣರಾಜೇಂದ್ರ, ಸುರೇಶ್, ನಗರ ಬಿಜೆಪಿ ಮಂಡಲ ಅಧ್ಯಕ್ಷ ವೇಣುಗೋಪಾಲ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಹಾಗೂ ಇತರರು ಉಪಸ್ಥಿತರಿದ್ದರು.