ಹಾಸನ : ಇಂದಿನಿಂದ ಬಿತ್ತನೆ ಆಲೂಗಡ್ಡೆ ಮಾರಾಟ ಪ್ರಾರಂಭಿಸುವ ಹಿನ್ನೆಲೆಯಲ್ಲಿ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಮಾರುಕಟ್ಟೆಗೆ ಶಾಸಕ ಪ್ರೀತಂ ಜೆ. ಗೌಡ ಭೇಟಿ ನೀಡಿದ್ದು, ವರ್ತಕರು ಹಾಗೂ ಎಪಿಎಂಸಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದರು.
ಹಾಸನ ಎಪಿಎಂಸಿಗೆ ಭೇಟಿ ನೀಡಿದ ಶಾಸಕ ಪ್ರೀತಂ ಗೌಡ ಬಿತ್ತನೆ ಆಲೂಗಡ್ಡೆ ಖರೀದಿಸಲು ರೈತರು ಎಪಿಎಂಸಿ ಆವರಣಕ್ಕೆ ಬರಲಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಖರೀದಿ ಮಾಡಲು ಎಲ್ಲಾ ವ್ಯವಸ್ಥೆ ಮಾಡಿರುವುದಾಗಿ ವರ್ತಕರು ಶಾಸಕರಿಗೆ ತಿಳಿಸಿದರು. ಈ ವೇಳೆ, ಶಾಸಕರು ಕೂಡ ಕೆಲವು ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.
ಶಾಸಕ ಪ್ರೀತಂ ಗೌಡ ಮಾತನಾಡಿ, ಬಿತ್ತನೆ ಆಲೂಗಡ್ಡೆ, ಗೊಬ್ಬರ ಮತ್ತು ಔಷಧಿಯನ್ನು ರೈತರಿಗೆ ಸುಲಭವಾಗಿ ದೊರೆಯುವಂತೆ ಮಾಡುವ ಉದ್ದೇಶದಿಂದ ವ್ಯಾಪಾರ ಪ್ರಾರಂಭಿಸಲು ನಿರ್ಧರಿಸಲಾಗಿದೆ. ರಾತ್ರಿ 12 ಗಂಟೆಯ ಬಳಿಕ ಎಪಿಎಂಸಿಯೊಳಗೆ ಯಾವುದೇ ಲಾರಿಗಳಿಗೆ ಪ್ರವೇಶವಿಲ್ಲ. ಖರೀದಿ ಮಾಡಿದ ಬಿತ್ತನೆ ಬೀಜವನ್ನು ರೈತರು ಇಲ್ಲಿಂದಲೇ ತಮ್ಮ ವಾಹನದಲ್ಲಿ ಕೊಂಡೊಯ್ಯಬೇಕು. ರೈತರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ಸಮರ್ಪಕವಾಗಿ ಆಲೂಗಡ್ಡೆ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಜನ ಗುಂಪಾಗಿ ಸೇರಬಾರದು ಎಂದರು.
ಅಂತಾರಾಜ್ಯ ಮತ್ತು ಜಿಲ್ಲಾ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಯಾರು, ಎಲ್ಲೇ ಇದ್ದರೂ ಜಿಲ್ಲೆಗೆ ಮರಳಿ ಬರಲು ಮತ್ತು ಇಲ್ಲಿಂದ ಹೊರ ಹೋಗಲು ಅವಕಾಶವಿದೆ. ಹೊರಗಡೆಯಿಂದ ಜಿಲ್ಲೆಗೆ ಬರುವವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಅವರಲ್ಲಿ ಯಾರಿಗಾದರೂ ಕೊರೊನಾ ಲಕ್ಷಣಗಳು ಕಂಡು ಬಂದರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.