ಹಾಸನ: ನಮಗೂ 14 ತಿಂಗಳು ಸರ್ಕಾರವಿರಲಿಲ್ಲ. ಕಾರ್ಯಕ್ರಮಕ್ಕೆ ಬರಬೇಕೆಂದು ಯಾರು ವಿಳ್ಯದೆಲೆ ಕೊಟ್ಟು ಕರೆಯುತ್ತಿರಲಿಲ್ಲ. ಆದರೆ ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ನಡವಳಿಕೆ ಏನೆಂಬುದನ್ನು ಇಡೀ ರಾಜ್ಯದ ಜನತೆ ನೋಡಿದ್ದಾರೆ. ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ(ಜನರಲ್ ಪವರ್ ಆಫ್ ಅಟಾರ್ನಿ) ಬರೆದುಕೊಟ್ಟಿಲ್ಲ. ಅಲ್ಲಿ ಪಾಳೇಗಾರರ ಸಂಸ್ಕೃತಿ ನಡೆಯಲ್ಲ. ಇನ್ಮುಂದೆ ಅವರ ನಡವಳಿಕೆ ತಿದ್ದಿಕೊಳ್ಳಬೇಕು ಎಂದು ಶಾಸಕ ಪ್ರೀತಂಗೌಡ ಹೇಳಿದರು.
ರಾಮನಗರ ಪ್ರಕರಣ ಖಂಡಿಸಿ ನಿನ್ನೆ (ಮಂಗಳವಾರ) ಹಾಸನದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಕ್ಯಾಬಿನೆಟ್ ಮಂತ್ರಿ ಭಾಷಣ ಮಾಡುವಾಗ ಪಾಳೇಗಾರರ ಸಂಸ್ಕೃತಿಯಲ್ಲಿ ಜಗಳಕ್ಕೆ ಹೋಗಿದ್ದಾರೆ. ಇಡೀ ರಾಜಕಾರಣಿಗಳು ತಲೆ ತಗ್ಗಿಸುವ ಕೆಲಸವನ್ನು ಸಂಸದ ಡಿ.ಕೆ.ಸುರೇಶ್ ಮಾಡಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯಾದ್ಯಂತ ಅಶ್ವತ್ಥ್ ನಾರಾಯಣ ಅವರನ್ನು ಬೆಂಬಲಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಮಾಫಿಯಾ ಆಫ್ ರಾಮನಗರ ಖಂಡಿಸುತ್ತೇವೆ. ಅವರು ಮಾಡುತ್ತಿರುವುದು ಅವರ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಂತೆ. ಕಾರ್ಯಕ್ರಮಕ್ಕೆ ಡಿ.ಕೆ ಸುರೇಶ್ ಅವರಿಗೆ ಡೋಲ್ ಸೆಟ್ಟು ಇಟ್ಟು ಆಹ್ವಾನ ಕೊಡಲು ಆಗಲ್ಲ. ಡಿಸಿಯಿಂದ ಸಮಸ್ಯೆ ಆಗಿದ್ದರೆ ಹಕ್ಕುಚ್ಯುತಿ ಮಂಡಿಸಲಿ.