ಹಾಸನ:ನಮ್ಮದು ಪ್ರಜಾಪ್ರಭುತ್ವ ಪಕ್ಷ. ನನ್ನನ್ನ ನಾನೇ ಅಭ್ಯರ್ಥಿ ಅಂತಾ ಹೇಳಿಕೊಳ್ಳಲು ನಾನು ದೊಡ್ಡ ಕುಟುಂಬದವನಲ್ಲ. ಪ್ರಜಾ ಪ್ರಭುತ್ವವನ್ನು ಬಿಟ್ಟು ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ರಾಜಕಾರಣ ಮಾಡೋದಕ್ಕೆ ನಮ್ಮಲ್ಲಿ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಶಾಸಕ ಪ್ರೀತಂ ಗೌಡ ಮತ್ತೊಮ್ಮೆ ಜೆಡಿಎಸ್ ಕುಟುಂಬ ರಾಜಕಾರಣವನ್ನು ಪರೋಕ್ಷವಾಗಿ ಕುಟುಕಿದರು.
ಹಾಸನದಲ್ಲಿ ಮಾತನಾಡಿದ ಅವರು, ನಾನು ಅಂದು ಹೇಳಿದ್ದ ಆ ಮಾತಿಗೆ ಯಾವತ್ತೂ ಹಿಂದೆ ಸರಿಯುವುದಿಲ್ಲ. ಮೊದಲು ಯಾರು ಅಭ್ಯರ್ಥಿ ಎಂದು ಅವರು ತೀರ್ಮಾನ ಮಾಡಿಕೊಳ್ಳಲಿ. ನಂತರ ನಾನು ಅವರ ಪ್ರತಿಸ್ಪರ್ಧಿಯಾಗಿ ನಿಲ್ಲವುದು, ಬಿಡದು ನಮ್ಮ ಹೈಕಮಾಂಡ್ಗೆ ಬಿಟ್ಟದ್ದು. ಅವರ ಹಾಗೆ ನಮ್ಮಲ್ಲಿ ನಾನೇ ಅಭ್ಯರ್ಥಿ ಅಂತಾ ಹೇಳಿಕೊಳ್ಳಲು ಸ್ವಾತಂತ್ರ್ಯ ಇಲ್ಲ ಎಂದರು.
ನಮ್ಮದು ಶಿಸ್ತು ಬದ್ಧ ಪಕ್ಷ: ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಚುನಾವಣೆ ಘೋಷಣೆಯಾಗುವ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು. ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾನು ಕೂಡ ಹಾಸನ ಕ್ಷೇತ್ರದ ಪ್ರಬಲ ಆಕಾಂಕ್ಷಿ. ನಮ್ಮ ಪಕ್ಷ ಹಾಸನದಿಂದ ಶಾಸಕ ಕಳೆದ ನಾಲ್ಕೂವರೆ ವರ್ಷದಲ್ಲಿ ಏನೇನು ಕೆಲಸ ಮಾಡಿದ್ದಾನೆ ಅನ್ನೋದನ್ನ ರಿಪೋರ್ಟ್ ತಗೋತಾರೆ. ಅದರ ಆಧಾರದ ಮೇಲೆ ಸಮೀಕ್ಷೆ ಆಗುತ್ತದೆ. ಸಮೀಕ್ಷೆ ಮಾಡಿದ ನಂತರ ಯಾರಿಗೆ ಟಿಕೆಟ್ ಕೊಡಬೇಕು ಅಂತ ಅವರು ತೀರ್ಮಾನ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತಾರೆ. ಆದರೆ ಬೇರೆ ಪಕ್ಷದ ರೀತಿ ನಮ್ಮ ಪಕ್ಷದಲ್ಲಿ ಇಲ್ಲ. ನಮ್ಮದು ಶಿಸ್ತು ಬದ್ಧ ಪಕ್ಷ. ನನ್ನ ಮಾರ್ಕ್ಸ್ ಕಾರ್ಡ್ ಚೆನ್ನಾಗಿದೆ ಅಂತಾ ನನಗೆ ಅನಿಸುತ್ತಿದೆ. ಹಾಗಾಗಿ ಈ ಬಾರಿಯೂ ನನಗೆ ಸಿಗಬಹುದು ಎಂಬ ಭರವಸೆಯಿದೆ ಎಂದರು.
ಟಿಕೆಟ್ ನೀಡಿದ ಮೇಲೆ ನಾನು ಉತ್ತರ ಕೊಡುತ್ತೇನೆ: ರೇವಣ್ಣ ಹಾಸನದಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಕ್ರೀಟ್ ಹಾಕಿ ಫೈನಲ್ ಆದ್ಮೇಲೆ ನಾನು ಮಾತಾಡ್ತೀನಿ. ಪ್ರತಿದಿನ ಅದನ್ನೇ ಯಾಕೆ ಕೇಳ್ತೀರಿ?. ಅಲ್ಲಿ ರೇವಣ್ಣ ಅಥವಾ ಅಕ್ಕ ಭವಾನಿ ಅಥವಾ ತಮ್ಮ ಸ್ವರೂಪ ನಿಲ್ಲಬಹುದು. ಇಲ್ಲವೇ ಕಾಂಗ್ರೆಸ್ನಿಂದ ಮಂಜೇಗೌಡ್ರು ಬನವಾಸಿ ರಂಗಸ್ವಾಮಿ ಇನ್ನು ಬೇರೆ ಬೇರೆ ಪಕ್ಷದಿಂದ ಯಾರೇ ನಿಂತ್ರು ನಾನು ಅವರಿಗೆ ಪ್ರತಿಸ್ಪರ್ಧೆ ಮಾಡಬೇಕು ಅನ್ನೋದನ್ನ ಪಕ್ಷ ನನಗೆ ಟಿಕೆಟ್ ನೀಡಿದ ಮೇಲೆ ನಾನು ಉತ್ತರ ಕೊಡುತ್ತೇನೆ ಎಂದರು.