ಹಾಸನ:ನಗರದ ಆರ್ಸಿ ರಸ್ತೆ ಬಳಿ ಇರುವ ಗಂಧದ ಕೋಠಿ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಗೆ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಳೆದ ಸರ್ಕಾರದ ಅವಧಿಯಲ್ಲಿ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ನಿರ್ಮಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಹೊಸ ಸರ್ಕಾರ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ. ಜೊತೆಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ನಡೆಯುತ್ತವೆ ಎಂದರು.
ಜಿ ಪ್ಲಸ್ 1 ಕಟ್ಟುವುದಕ್ಕೆ ಪ್ರಾರಂಭಿಕವಾಗಿ 50 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದು, ಆ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ. ಆದರೆ ಇದು ಜಿ ಪ್ಲಸ್ 3 ಕಟ್ಟುವ ಪ್ರಸ್ತಾವನೆಯಾಗಿದ್ದು, ಕೆಲಸ ನೋಡಿ ಮುಂದಿನ ದಿನಗಳಲ್ಲಿ 100 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರದಿಂದ ತಂದು, ಕಾಮಗಾರಿ ಪೂರ್ಣಗೊಳಿಸುತ್ತೇವೆ. ಇಡೀ ರಾಜ್ಯಕ್ಕೆ ಮಾದರಿಯಾಗುವಂತಹ ನೂತನ ತಂತ್ರಜ್ಞಾನವುಳ್ಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಗೆ ಶಾಸಕ ಪ್ರೀತಂ ಗೌಡ ಗುದ್ದಲಿ ಪೂಜೆ ಶ್ರೀ ಗಂಧದ ಕೋಠಿ ಆವರಣಲ್ಲಿ ನಾಲ್ಕು ಎಕರೆ ಭೂಮಿಯನ್ನು ಕಾಲೇಜಿಗೆ ಮೀಸಲಿಟ್ಟಿದ್ದು, ಮತ್ತೆ 4 ಎಕರೆ ಭೂಮಿ ಆಸ್ಪತ್ರೆ ಹಾಗೂ ಉಳಿದ ನಾಲ್ಕು ಎಕರೆ ಜಾಗದಲ್ಲಿ ಉದ್ಯಾನವನ ನಿರ್ಮಿಸಬೇಕೆಂದು ತೀರ್ಮಾನಿಸಲಾಗಿದೆ. ಸಿಎಂ ಯಡಿಯೂರಪ್ಪ ಹಾಗೂ ಜಿಲ್ಲಾ ಮಂತ್ರಿ ಮಾಧುಸ್ವಾಮಿಯವರ ಸಲಹೆ ಮೇರೆಗೆ ಮುಂದಿನ ದಿನಗಳಲ್ಲಿ ಆ ಕೆಲಸವನ್ನು ಕೈಗೆತ್ತಿಗೊಳ್ಳಲಾಗುವುದು ಎಂದರು.