ಹಾಸನ: ಇಲ್ಲಿನ ಜನರು ನನ್ನನ್ನು ಶಾಸಕನಾಗಿ ಗೆಲ್ಲಿಸಿದ್ದಾರೆ. ತುಂಬಾ ಆಸಕ್ತಿ ಇದ್ದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಹಾಸನದಿಂದ ಹೆಚ್.ಡಿ. ರೇವಣ್ಣನವರು ಸ್ಪರ್ಧಿಸಿ ಗೆಲ್ಲಲಿ ಎಂದು ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ಸವಾಲು ಹಾಕಿದರು.
ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಸ್ಥಳೀಯರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಹಾಸನ ಕ್ಷೇತ್ರ, ಹೊಳೆನರಸೀಪುರ ಕ್ಷೇತ್ರ ಅಲ್ಲ ಎಂದು ಮೊದಲೇ ಹೇಳಿರುವೆ ಎಂದು ವಾಗ್ದಾಳಿ ನಡೆಸಿದರು.
ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲು ಜಾಗ ತೆರವುಗೊಳಿಸುವ ವೇಳೆ ಎರಡು ಮೂರು ಜನ ತಮ್ಮ ಪ್ರತಿಷ್ಠೆ ಪ್ರದರ್ಶಿಸಿದ್ದಾರೆ. ಇದಕ್ಕೆ ಯಾವ ಸೊಪ್ಪು ಹಾಕುವುದಿಲ್ಲ. ಸಾರ್ವಜನಿಕರಿಗೆ ರೈಲ್ವೆ ಮೇಲ್ಸೇತುವೆ ಅವಶ್ಯಕತೆ ಇದ್ದು, ಇದಕ್ಕಾಗಿ ಯಾವ ಹಂತಕ್ಕಾದರೂ ಜನಪ್ರತಿನಿಧಿಯಾಗಿ ಹೋಗಲು ಸಿದ್ಧನಿದ್ದೇನೆ. ಕೇವಲ ಒಬ್ಬರಿಬ್ಬರ ಹಿತಾಸಕ್ತಿ ಕಾಪಾಡುವುದಕ್ಕಾಗಿ ವರ್ಷಾನುಗಟ್ಟಲೆ ವಿಳಂಬ ಮಾಡುವುದಕ್ಕೆ ತಯಾರಿಲ್ಲ ಎಂದು ಶಾಸಕ ಸ್ಪಷ್ಟಪಡಿಸಿದರು.
ಈಗ ರಸ್ತೆಗಾಗಿ ಅಲ್ಲಿನ ಮನೆಗಳ ಕಾಂಪೌಂಡ್ ಒಡೆಯಲಾಗಿದೆ. ಬಿಜೆಪಿ ಸರ್ಕಾರವು ಮಾಜಿ ಸಚಿವ ರೇವಣ್ಣನವರ ಮಾತು ಕೇಳುವುದನ್ನು ಬಿಟ್ಟು ಈಗಾಗಲೇ ಒಂದೂವರೆ ವರ್ಷಗಳೇ ಕಳೆದಿವೆ. ಅವರು ಹೊಳೆನರಸೀಪುರ ಕ್ಷೇತ್ರದ ಶಾಸಕರು ಆಗಿರುವುದರಿಂದ ಅವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏನಾದರೂ ಸಲಹೆ ಸೂಚನೆ ಇದ್ದರೇ ಕೊಡಲಿ. ಇದನ್ನ ಬಿಟ್ಟು ಹಾಸನ ಕ್ಷೇತ್ರದ ಬಗ್ಗೆ ಅವರಿಗೆ ತಲೆನೋವು ಬೇಡ ಎಂದು ಟಾಂಗ್ ಕೊಟ್ಟರು.