ಹಾಸನ: ಬೇಲೂರು ತಾಲೂಕಿನ ಕೆಲ ಪಶುವೈದ್ಯಾಧಿಕಾರಿಗಳು ತಮ್ಮ ಕಚೇರಿಯ ಕರ್ತವ್ಯವನ್ನು ಮರೆತು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಹೈನುಗಾರಿಕೆ ನಡೆಸುವ ರೈತರಿಂದ ಚಿಕಿತ್ಸೆಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ರೈತರಿಂದ ದೂರುಗಳು ಕೇಳಿಬಂದಿವೆ. ಇಂತಹ ಪ್ರಕರಣಗಳು ಮುಂದುವರೆದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಬೇಲೂರು ಶಾಸಕ ಕೆ.ಎಸ್. ಲಿಂಗೇಶ್ ಎಚ್ಚರಿಕೆ ನೀಡಿದ್ರು.
ಪಶುವೈದ್ಯಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕ ಕೆ.ಎಸ್. ಲಿಂಗೇಶ್ - ಇತ್ತೀಚಿನ ಹಾಸನ ಸುದ್ದಿ
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿ.ಬಿ. ರಂಗೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ, ಬೇಲೂರು ಶಾಸಕ ಕೆ.ಎಸ್. ಲಿಂಗೇಶ್ ರೈತರಿಗಾಗುತ್ತಿರುವ ಅನ್ಯಾಯಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪಶುವೈದ್ಯಾಧಿಕಾರಿಗಳಿಗೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿ.ಬಿ. ರಂಗೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹೈನುಗಾರಿಕೆ ರೈತರಿಗೆ ಪ್ರಮುಖ ಉದ್ಯೋಗವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಶುಗಳಿಗೆ ಆನೇಕ ಕಾಯಿಲೆಗಳು ಬರುತ್ತಿದ್ದು, ಈ ಬಗ್ಗೆ ಪಶು ಇಲಾಖೆ ಎಸಿ ರೂಂನಿಂದ ಆಚೆ ಬಂದು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ನೀಡಬೇಕು. ಪ್ರಮುಖವಾಗಿ ಕಾಲುಬಾಯಿ ಜ್ವರದ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕಿದೆ ಎಂದರು.
ಇನ್ನು ಗಂಗಕಲ್ಯಾಣ ಯೋಜನೆಯ ವಿಳಂಬಕ್ಕೆ ವಿದ್ಯುತ್ ಇಲಾಖೆಯ ಮೃದುಧೋರಣೆ ಕಾರಣವಾಗಿದೆ. ಅರೇಹಳ್ಳಿ ಚೀಕನಹಳ್ಳಿ ಭಾಗದ ಮಲೆನಾಡು ಪ್ರದೇಶದಲ್ಲಿ ತೋಟದ ಮಧ್ಯೆ ವಿದ್ಯುತ್ ಲೈನ್ ಹಾದು ಹೋಗಿರುವ ಕಾರಣದಿಂದ ಇಲಾಖೆ ತೆರವು ಮಾಡಬೇಕಿದೆ. ತಾಲೂಕಿನಲ್ಲಿ ಬಹುತೇಕ ರಸಗೊಬ್ಬರ ಮಾರಾಟಗಾರರು ತಮಗೆ ಇಷ್ಟಬಂದ ರೀತಿಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಾ ರೈತರಿಗೆ ತೀವ್ರ ಅನ್ಯಾಯ ಮಾಡುತ್ತಿದ್ದಾರೆ. ಹಾಗಾಗಿ ಕೃಷಿ ಇಲಾಖೆ ಭೇಟಿ ನೀಡಿ ದರಪಟ್ಟಿ ಮತ್ತು ಮೀತಿಮೀರಿದ ಕೀಟನಾಶಕ ಮಾರಾಟ ಅಂಗಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.