ಹಾಸನ: ಕೊರೊನಾ ಹರಡುವಿಕೆ ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಳುವಂತೆ ಎತ್ತಿನಹೊಳೆ ಯೋಜನೆ ಕಾಮಗಾರಿ, ಕೂಲಿ ಕಾರ್ಮಿಕರಿಗೆ ಎಷ್ಟೇ ಮನವಿ ಮಾಡಿದರೂ ನಿಯಮ ಪಾಲನೆ ಮಾಡುತ್ತಿಲ್ಲ. ಇಂಜಿನಿಯರ್‌ಗಳು ಕೂಡಲೇ ಸ್ಪಂದಿಸಬೇಕು ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್. ಕೆ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಆಲೂರು ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದ ಸಮೀಪದಲ್ಲಿ ನಡೆಯುತ್ತಿರುವ, ಎರಡನೇ ಹಂತದ ಎತ್ತಿನಹೊಳೆ ಯೋಜನೆಯ ಕಾಮಗಾರಿ ಸ್ಥಳದಲ್ಲಿ ವಾಸವಿರುವ ವಲಸೆ ಕೂಲಿ ಕಾರ್ಮಿಕರ ಶೆಡ್‌ಗಳನ್ನು ಪರಿಶೀಲಿಸಿ ಮಾತನಾಡಿದ್ರು.
ಕೊರೊನಾ ಮಹಾಮಾರಿ ಕುರಿತು ಖುದ್ದಾಗಿ ತಹಶೀಲ್ದಾರ್, ಆರೋಗ್ಯಾಧಿಕಾರಿಗಳು ಸ್ಥಳಕ್ಕೆ 3 ಬಾರಿ ಭೇಟಿ ನೀಡಿ, ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸಿ, ನೋಟಿಸ್ ಕೂಡ ಜಾರಿ ಮಾಡಿದ್ದಾರೆ.
ಆದರೂ ಈ ಯೋಜನೆಯ ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಅಲ್ಲದೆ ಕಾರ್ಮಿಕ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ, ಉದಾಸೀನತೆ ತೋರಿರುವುದು ಎದ್ದು ಕಾಣುತ್ತಿದೆ. ಸುಮಾರು 200 ವಲಸೆ ಕಾರ್ಮಿಕರು ವಾಸವಿರುವ ಈ ಸ್ಥಳದಲ್ಲಿ ಯಾರೊಬ್ಬರೂ ಸಾಮಾಜಿಕ ಅಂತರವನ್ನು ಪಾಲನೆ ಮಾಡುತ್ತಿಲ್ಲ. ಗುಂಪು-ಗುಂಪಾಗಿ ಶೆಡ್ಡಿನಲ್ಲಿ ಸೇರಿಕೊಂಡಿದ್ದಾರೆ. ಆರೋಗ್ಯದ ಹಿತ ದೃಷ್ಠಿಯಿಂದ ಈ ಸ್ಥಳದಲ್ಲಿ ಹೊಸ ಶೆಡ್‌ಗಳನ್ನು ನಿರ್ಮಿಸಿ, ಯಾರೂ ಕೂಡ ಹೊರ ಹೋಗದ ಹಾಗೆ ನಿಗಾ ವಹಿಸಬೇಕು. ಸರ್ಕಾರದ ಲಾಕ್‌ಡೌನ್ ನಿಯಮಗಳನ್ನು ಎಲ್ಲರೂ ಪಾಲನೆ ಮಾಡುವಂತೆ ಕ್ರಮ ವಹಿಸಬೇಕೆಂದು ಈ ಯೋಜನೆಯ ಇಂಜಿನಿಯರ್‌ಗಳಿಗೆ ಮತ್ತು ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ.