ಅರಕಲಗೂಡು: ಕೋವಿಡ್-19 ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರದ ನಿಯಮ ಉಲ್ಲಂಘಿಸಿ ಹೆಚ್ಚಿನ ಜನರು ಪಾಲ್ಗೊಳ್ಳಲು ಅವಕಾಶ ನೀಡಿದ ಮೂರು ಕಲ್ಯಾಣ ಮಂಟಪಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ನಿಯಮ ಪಾಲನೆ ಕಟ್ಟು ನಿಟ್ಟಾಗಿ ಪಾಲನೆಯಾಗದಿದ್ದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.
ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅತಿವೃಷ್ಟಿಯ ಪರಿಣಾಮ ರೂ 39.17 ಕೋಟಿ ಆಸ್ತಿ-ಪಾಸ್ತಿ, ಬೆಳೆನಷ್ಟ ಸಂಭವಿಸಿದ್ದು, ಸರ್ಕಾರಕ್ಕೆ ವರದಿ ನೀಡಲಾಗಿದೆ. ಮಳೆಯಿಂದ 19 ಮನೆಗಳು ಸಂಪೂರ್ಣವಾಗಿ ಹಾಗೂ 42 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 80 ಹೆಕ್ಟೇರ್ ವಿವಿಧ ತೋಟಗಾರಿಕೆ ಬೆಳೆಗಳು ಹಾಗೂ 1,150 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿದೆ. ಜಿಲ್ಲಾ ಪಂಚಾಯತ್ಗೆ ರೂ. 2.23 ಕೋಟಿ ಮತ್ತು ಲೋಕೋಪಯೋಗಿ ಇಲಾಖೆಗೆ ರೂ. 33 ಕೋಟಿ ವಿವಿಧ ಆಸ್ತಿಗಳಿಗೆ ಹಾನಿ ಸಂಭವಿಸಿದೆ ಎಂದರು.
ಪಟ್ಟಣ ಆಸ್ಪತ್ರೆಗೆ 50 ಆಕ್ಸಿಜನ್ ಸಂಪರ್ಕ ಕಲ್ಪಿಸಲು ಮಂಜೂರಾತಿ ದೊರೆತಿದೆ. ತಾವು ಆರೋಗ್ಯ ಇಲಾಖೆ ನಿರ್ದೇಶಕರನ್ನು ಭೇಟಿ ಮಾಡಿ ಇದನ್ನು 75ಕ್ಕೆ ವಿಸ್ತರಿಸಲು ಮನವಿ ಮಾಡಿದ್ದು ಮಂಜೂರಾತಿ ದೊರೆತಿದೆ ಎಂದರು.