ಅರಕಲಗೂಡು:ಕೊಣನೂರು ಹೋಬಳಿಯ ಸುಳುಗೋಡು ಸೋಮವಾರ ಗ್ರಾಮದಲ್ಲಿ ಬಸವೇಶ್ವರ ದೇವಾಲಯದ ಬಳಿ ಊಟದ ಹಾಲ್ ನಿರ್ಮಾಣಕ್ಕೆ ಶಾಸಕ ಎ.ಟಿ.ರಾಮಸ್ವಾಮಿ ಭೂಮಿಪೂಜೆ ನೆರವೇರಿಸಿದರು.
ಕೊಣನೂರು ತಾಲ್ಲೂಕಿನ ಕೆರೆಗಳಿಗೆ ವರದಾನವಾಗಲಿರುವ ಬಹುನಿರೀಕ್ಷಿತ 200 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಮಲ್ಲಿಪಟ್ಟಣ ಏತ ನೀರಾವರಿ ಶಾಶ್ವತ ಯೋಜನೆಗೆ 120 ಕೋಟಿ ರೂ. ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ. ಇನ್ನೂ 70 ಕೋಟಿ ಮಂಜೂರಾಗಬೇಕಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಶಾಸಕ ಎ.ಟಿ ರಾಮಸ್ವಾಮಿ ಊಟದ ಹಾಲ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಹೋಬಳಿಯ ಸುಳಗೋಡು ಸೋಮವಾರ ಗ್ರಾಮದಲ್ಲಿ ಭಾನುವಾರ 15 ಲಕ್ಷದ ವೆಚ್ಚದಲ್ಲಿ ನೀರಾವರಿ ಇಲಾಖೆಯ ವತಿಯಿಂದ ಊಟದ ಹಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿ, ಸರ್ಕಾರದ ಮಟ್ಟದಲ್ಲಿ 190 ಕೋಟಿ ವೆಚ್ಚದ ಬೃಹತ್ ಯೋಜನೆಯನ್ನು ತರಲು ನಾನು ಪಟ್ಟಿರುವ ಶ್ರಮ ಜನತೆಗೆ ತಿಳಿಯುವುದಿಲ್ಲ. ನೀವುಗಳು ಹೋರಾಟ ಮಾಡಿದ್ದರೆ ಅದರ ಮಹತ್ವ ನಿಮಗೆ ತಿಳಿಯುತ್ತಿತ್ತು. ತಾಲ್ಲೂಕಿನ ಬಹುತೇಕ ಕೆರೆಗಳ ಅಚ್ಚುಕಟ್ಟಿನ ಭತ್ತದ ಗದ್ದೆಗಳು ಹೊಡೆಕಟ್ಟುವ, ಕಾಯಿಕಟ್ಟುವ ಹಂತದಲ್ಲಿ ಕೆರೆಯ ನೀರು ಖಾಲಿಯಾಗಿ ಒಣಗಿಹೋಗುತ್ತಿದ್ದು, ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಯಿಂದ ತಾಲ್ಲೂಕಿನ 200 ಕ್ಕೂ ಹೆಚ್ಚು ಕೆರೆಗಳು ವರ್ಷಪೂರ್ತಿ ತುಂಬಿ ಬೆಳೆಗಳು ಮತ್ತು ಕೊಳವೆಬಾವಿಗಳು ಬತ್ತದಿರಲು ವರದಾನವಾಗಲಿದೆ ಎಂದರು.
ಕೊರೊನಾ ಸಮಸ್ಯೆಯಿಂದಾಗಿ ಹಣಕಾಸಿನ ಸಂಕಷ್ಟದಿಂದಾಗಿ ಅಭಿವೃದ್ಧಿಗೆ ನೀಡಿದ್ದ ಅನುದಾನಗಳನ್ನು ಸರ್ಕಾರ ಹಿಂತೆಗೆದುಕೊಂಡಿತ್ತು. ಮುಖ್ಯಮಂತ್ರಿಗಳು ಮತ್ತು ನೀರಾವರಿ ಮಂತ್ರಿಗಳ ಸಹಕಾರದಿಂದ ಹಿಂತೆಗೆದುಕೊಂಡಿದ್ದ 10 ಕೋಟಿ ರೂ. ಅನುದಾನ ಮತ್ತೆ ಮಂಜೂರು ಮಾಡಿಸಿ ತಂದು ಸುಳುಗೋಡು ಸೋಮವಾರದ ಊಟದ ಹಾಲ್ ಸೇರಿದಂತೆ ತಾಲ್ಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಹೇಮಾವತಿ ಪುನರ್ವಸತಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುನೀತ್, ಗುತ್ತಿಗೆದಾರ ಪಾಂಡು, ಮುಖಂಡರಾದ ಹಿರಣ್ಣೇಗೌಡ, ಅಣ್ಣೇಗೌಡ, ಎಸ್.ಡಿ.ಯೋಗಣ್ಣ, ಬೈಮಾನ ರಾಮಯ್ಯ, ಮಂಜೇಗೌಡ ಮತ್ತಿತರರಿದ್ದರು.