ಅರಕಲಗೂಡು: ಒಂದು ಕೋಟಿ ರೂ. ವೆಚ್ಚದ ಡಿ. ದೇವರಾಜ ಅರಸು ಭವನ ನಿರ್ಮಾಣಕ್ಕೆ ಶಾಸಕ ಎ. ಟಿ. ರಾಮಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.
ದೇವರಾಜ ಅರಸು ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಎ. ಟಿ. ರಾಮಸ್ವಾಮಿ - foundation stone for Devaraja Raja Bhavan.
ಅರಕಲಗೂಡು ಪಟ್ಟಣದ ಹಳೆ ತಾಲೂಕು ಕಚೇರಿ ಆವರಣದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಡಿ. ದೇವರಾಜ ಅರಸು ಭವನ ನಿರ್ಮಾಣವಾಗುತ್ತಿದೆ. ಈ ಕಟ್ಟಡ ಕಾಮಗಾರಿಗೆ ಶಾಸಕ ಎ. ಟಿ. ರಾಮಸ್ವಾಮಿ ಇಂದು ಗುದ್ದಲಿ ಪೂಜೆ ನೆರವೇರಿಸಿದರು.
ಪಟ್ಟಣ ಹಳೆ ತಾಲೂಕು ಕಚೇರಿ ಆವರಣದಲ್ಲಿ ಡಿ. ದೇವರಾಜ ಅರಸು ಭವನ ಕಟ್ಟಡ ಕಾಮಗಾರಿ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇವರಾಜ ಅರಸು ಅವರು ಬಡ ಕೂಲಿ ಕಾರ್ಮಿಕರ ಏಳಿಗೆ ಶ್ರಮಿಸಿದ ಮಹಾನ್ ವ್ಯಕ್ತಿ. ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೆ ತಂದವರು. ಜೀತ ಪದ್ಧತಿಯನ್ನು ತೊಡೆದುಹಾಕಿ ದೀನ-ದಲಿತರ ಉದ್ಧಾರಕ್ಕಾಗಿ ಶ್ರಮಿ ಜನಸಾಮಾನ್ಯರ ಅಚ್ಚುಮೆಚ್ಚಿನ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇಂತಹ ಮಹಾನ್ ವ್ಯಕ್ತಿಯ ಹೆಸರಿನ ಭವನ ತಾಲೂಕಿನಲ್ಲಿ ನಿರ್ಮಾಣವಾಗತ್ತಿರುವುದು ನಮ್ಮ ಸೌಭಾಗ್ಯ. ಇವರ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ವೈ.ಎಂ. ರೇಣುಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯೆ ರತ್ನಮ್ಮ ಲೋಕೇಶ್, ತಾಲೂಕು ಪಂಚಾಯತ್ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಾಜು ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.