ಹಾಸನ: ನಾನು ಹಾಸನ ಜಿಲ್ಲೆಯ ಅಳಿಯ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಪಡೆದು ವಾರಗಳು ಕಳೆದಿವೆ. ಎಲ್ಲಾ ಸಮಸ್ಯೆಗಳನ್ನು ಒಂದೇ ಬಾರಿಗೆ ಬಗೆಹರಿಸುವುದು ಕಷ್ಟ. ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಮೂರು ದಿನಗಳಿಂದ ಹಾಸನ ಪ್ರವಾಸ ಕೈಗೊಂಡಿರುವ ಅವರು, ಇಂದು ಬೇಲೂರಿನ ಚೆನ್ನಕೇಶವನ ದರ್ಶನ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕೊರೊನಾ ತೊಲಗಲಿ ಎಂದು ಬೇಲೂರು ಚೆನ್ನಕೇಶವನಲ್ಲಿ ಪ್ರಾರ್ಥಿಸಿದ್ದೇನೆ. ಈಗಾಗಲೇ ಒಂದು ಸುತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇನೆ. ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳ ಸಭೆಗೆ ವರದಿ ಸಲ್ಲಿಸುತ್ತೇನೆ ಎಂದರು.
ಬೇಲೂರಿನ ಚೆನ್ನಕೇಶವನ ದರ್ಶನ ಪಡೆದ ಸಚಿವ ಕೆ.ಗೋಪಾಲಯ್ಯ ಹೊಸದಾಗಿ ಜಿಲ್ಲೆಗೆ ಬಂದ ನಾನು ಎಲ್ಲವನ್ನೂ ಒಮ್ಮೆಲೇ ಮಾಡಲು ಸಾಧ್ಯವಿಲ್ಲ. ಬೇಲೂರಿನ ರಸ್ತೆ ಅಗಲೀಕರಣ, ಸಕಲೇಶಪುರದ ಕಾಡಾನೆ ಸಮಸ್ಯೆ, ಅರಸೀಕೆರೆ ಮತ್ತು ಚನ್ನರಾಯಪಟ್ಟಣ, ಹಳೇಬೀಡು-ಮಾದಿಹಳ್ಳಿ ನೀರಾವರಿ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಹೇಳಿದರು.
ಜೂನ್ 25ರಿಂದ ಪ್ರಾರಂಭಗೊಳ್ಳುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಜಿಲ್ಲೆಯ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಭೆ ಕರೆದು ಚರ್ಚಿಸಲಾಗಿದೆ. ಮೂರು ತಿಂಗಳಿನಿಂದ ವಿದ್ಯಾರ್ಥಿಗಳು ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಬಂದ ಸಂದರ್ಭದಲ್ಲಿ ಗುಂಪು ಗುಂಪಾಗಿ ಸೇರುವುದು ಸಾಮಾನ್ಯ. ಪೋಷಕರಲ್ಲಿ ಕೊರೊನಾ ಕುರಿತು ಆತಂಕ ಬೇಡ ಎಂದರು.