ಹಾಸನ: ಈಗಾಗಲೇ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಈ ಕಾಯ್ದೆ ಬಗ್ಗೆ ವಿಧಾನ ಪರಿಷತ್ನಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಪಡೆಯುತ್ತೇವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಹೇಳಿದರು.
ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಹಾಸನದ ಪಶುವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೋವುಗಳು ಎಂದರೆ ನಮ್ಮ ಮಾತಾ, ಗೋವುಗಳ ರಕ್ಷಣೆಯಾಗಬೇಕು. ಕಸಯಿಖಾನೆಗೆ ಹೋಗಬಾರದು, ಗೋ ಹತ್ಯೆಯಾಗಬಾರದು ಎಂಬ ಉದ್ದೇಶದಿಂದ ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದೇವೆ. ಇದರ ಜೊತಗೆ ಪ್ರತೀ ತಾಲೂಕಿನಲ್ಲಿ ಗೋಶಾಲೆ ನಿರ್ಮಾಣ ಮಾಡುವ ಚಿಂತನೆಯಿದೆ. ಇದಕ್ಕಾಗಿ ಭೂಮಿ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗುಜರಾತ್, ಉತ್ತರ ಪ್ರದೇಶಕ್ಕೆ ಹೋಗಿ ಅಧ್ಯಯನ ಮಾಡಿದ್ದೇನೆ ಎಂದರು.
ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಎಸ್ಪಿಯವರಿಗೆ ಸೂಚನೆ ನೀಡಿದ್ದೇವೆ. ಗೋವು ಕಳ್ಳತನ ಮಾಡಿದ್ರೆ ಅಂತಹವರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಯಾರಾದರೂ ಗೋಹತ್ಯೆ ಮಾಡಿದರೆ 50 ಸಾವಿರದಿಂದ 1 ಲಕ್ಷದವರೆಗೆ ದಂಡ, 2ನೇ ಬಾರಿ ಗೋ ಹತ್ಯೆ ಮಾಡಿದರೆ 10 ಲಕ್ಷದವರೆಗೆ ದಂಡ ವಿಧಿಸಲಾಗುವುದು. ಗೋ ಹತ್ಯೆ ಮಾಡುವವರಿಗೆ 3ರಿಂದ 7 ವರ್ಷಕ್ಕೆ ಜೈಲು ಶಿಕ್ಷೆ ಏರಿಸಲಾಗಿದೆ ಎಂದರು.
ಓದಿ:ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ನಂತರ ಮೊದಲ ಪ್ರಕರಣ ದಾಖಲು: ಸಚಿವ ಪ್ರಭು ಚವ್ಹಾಣ್
ಇದಕ್ಕೂ ಮುನ್ನ ಹಾಸನದ ಪಶು ವೈದ್ಯಕೀಯ ಕಾಲೇಜಿನಲ್ಲಿ 11 ಗಂಟೆಯಾಗುತ್ತಿದ್ದಂತೆ ಹುತಾತ್ಮರ ದಿನಾಚರಣೆ ಪ್ರಯುಕ್ತ ಒಂದು ನಿಮಿಷ ಸಚಿವರು ಮತ್ತು ಶಾಸಕರು ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ ಮೌನಾಚರಣೆ ಮಾಡಿದ್ರು.