ಕರ್ನಾಟಕ

karnataka

ETV Bharat / state

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೆಡಿಪಿ ಸಭೆ: ಅಧಿಕಾರಿಗಳಿಗೆ ತರಾಟೆ - madhuswamy latest hassan visits

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೆಡಿಪಿ ಸಭೆ ನಡೆಸಿದ್ದು, ಹಲವು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

minister madhuswamy kdp meeting in hassan
ಸಚಿವ ಜೆ.ಸಿ.ಮಾಧುಸ್ವಾಮಿ ಕೆಡಿಪಿ ಸಭೆ

By

Published : Jan 25, 2020, 4:37 AM IST

ಹಾಸನ:ಆರ್ಥಿಕ, ಭೌತಿಕ ಗುರಿ ಸಾಧಿಸದ ಹಾಗೂ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೃಷಿ, ತೋಟಗಾರಿಕೆ, ಪಶುಪಾಲನಾ, ಸೆಸ್ಕ್‌, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಲೀಡ್‌ ಬ್ಯಾಂಕ್‌ ಅಧಿಕಾರಿಗಳ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಇದೇ ರೀತಿ ಕೆಲಸ ಮುಂದುವರಿಸಿದರೆ ಮನೆಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದರು.

ಸಚಿವ ಜೆ.ಸಿ.ಮಾಧುಸ್ವಾಮಿ ಕೆಡಿಪಿ ಸಭೆ

ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗೆ ನೋಂದಾಯಿಸಿದ ರೈತರ ಸಂಖ್ಯೆ ತೀರಾ ಕಡಿಮೆ ಇದೆ. ಜಿಲ್ಲೆಯಲ್ಲಿ 4,35,681 ಕುಟುಂಬಗಳ ಪೈಕಿ ಮುಂಗಾರಿನಲ್ಲಿ 18128 ಮತ್ತು ಹಿಂಗಾರಿನಲ್ಲಿ 118 ರೈತರು ನೋಂದಣಿ ಮಾಡಿಸಿದ್ದಾರೆ. ಆಲೂರು, ಚನ್ನರಾಯಪಟ್ಟಣ, ಸಕಲೇಶಪುರದಲ್ಲಿ ಒಬ್ಬರು ನೋಂದಣಿ ಮಾಡಿಸಿಲ್ಲ. ಏನು ಕೆಲಸ ಮಾಡುತ್ತಿದ್ದೀರಿ ಎಂದು ಸಚಿವರು ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಧುಸೂದನ್‌, ‘ಕಳೆದ ಬಾರಿಯ ವಿಮೆ ಹಣ ₹ 48 ಕೋಟಿ ಪೈಕಿ ₹ 43 ಕೋಟಿ ತಡವಾಗಿ ಬಂತು. ಹಾಗಾಗಿ ರೈತರು ವಿಮೆಗೆ ನೋಂದಣಿ ಮಾಡುತ್ತಿಲ್ಲ. ಡಿಸಿಸಿ ಬ್ಯಾಂಕ್ ಬೆಳೆ ಸಾಲ ನೀಡಿಲ್ಲ ಎಂದರು.

ಇದಕ್ಕೆ ಧನಿಗೂಡಿಸಿದ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ, ‘ ಪರಿಹಾರ ಬರುವುದಿಲ್ಲ ಅಂದುಕೊಂಡು ರೈತರು ಬೆಳೆ ವಿಮೆ ಮಾಡಿಸುತ್ತಿಲ್ಲ. ಈ ಬಾರಿ ಉತ್ತಮ ಮಳೆಯಾಗಿ, ಬೆಳೆ ಚೆನ್ನಾಗಿರುವ ಕಾರಣ ಹಣ ಕಟ್ಟಿದರೂ ಪರಿಹಾರ ಬರುವುದಿಲ್ಲ ಅಂದುಕೊಂಡಿದ್ದಾರೆ’ ಎಂದು ವಿವರಿಸಿದರು.

‘ಕೃಷಿ ಪ್ರಧಾನ ಜಿಲ್ಲೆಯಲ್ಲಿ ಬೆಳೆ ವಿಮೆ ಸಾಧನೆ ಕಡಿಮೆ ಇದೆ. ಇದು ರಾಜಕಾರಣಿಗಳು ತಲೆ ತಗ್ಗಿಸುವ ವಿಚಾರ. ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು’ ಎಂದು ನಿರ್ದೇಶನ ನೀಡಿದರು.

ಬೆಳೆ ನೋಟಿಫೈ ಬಗ್ಗೆ ಮಾಹಿತಿ ಇಲ್ಲದ ಲೀಡ್ ಬ್ಯಾಂಕ್ ಮ್ಯಾನೇಜರ್ ಬಸವರಾಜ್ ವಿರುದ್ಧ ಗರಂ ಆದ ಸಚಿವರು, ಕೆಡಿಪಿ ಸಭೆಗೆ ಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು. ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಮನೆಗೆ ಹೋಗಬಹುದು ಎಂದು ಗುಡುಗಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ಪ್ರಸಕ್ತ ಹಣಕಾಸು ವರ್ಷ ಮುಗಿಯುತ್ತಿದ್ದರೂ ಪ್ರಗತಿ ಸಾಧಿಸಿಲ್ಲ. ಸಬ್ಸಿಡಿ ಬಂದಿಲ್ಲ ಎಂದು ರೈತರು ಮನೆ ಬಾಗಿಲಿಗೆ ಬರುತ್ತಾರೆ. ಪಶುಭಾಗ್ಯ ಯೋಜನೆಯಲ್ಲಿ ಹತ್ತು ಹಸು ನೀಡಿದರೆ ಯಾರಿಗೆ ಕೊಡುವುದು? ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವಿಧಾನಸಭಾ ಕ್ಷೇತ್ರಕ್ಕೆ 200 ಹಸು ಕೊಡುತ್ತಿದ್ದರು, ಶಾಸಕರ ಮಾನ ಹರಾಜು ಹಾಕಬೇಡಿ. ಹೆಚ್ಚು ಹಸುಗಳನ್ನು ನೀಡಿ. ಇಲ್ಲವಾದರೆ ಯೋಜನೆ ರದ್ದು ಮಾಡಬೇಕು’ ಎಂದು ಆಗ್ರಹಿಸಿದರು.

ಶಿಥಿಲಗೊಂಡಿರುವ ಪ್ರಾಥಮಿಕ, ಪ್ರೌಢ ಶಾಲಾ ಕಟ್ಟಡಗಳ ದುರಸ್ತಿಗೆ ಹಣ ಬಿಡುಗಡೆ ಮಾಡಬೇಕೆಂಬ ಶಾಸಕರಾದ ಬಾಲಕೃಷ್ಣ, ಶಿವಲಿಂಗೇಗೌಡ, ಲಿಂಗೇಶ್‌, ಎಚ್‌.ಕೆ.ಕುಮಾರಸ್ವಾಮಿ ಮನವಿಗೆ ಸ್ಪಂದಿಸಿದ ಸಚಿವರು, ಅಂಗನವಾಡಿಗಳ ರಿಪೇರಿಗೆ ಹಣ ಬಿಡುಗಡೆ ಮಾಡಲಾಗಿದೆ. ಉದ್ಯೋಗ ಖಾತ್ರಿಯಿಂದಾದರೂ ಕಟ್ಟಡಗಳ ದುರಸ್ತಿಗೆ ಹಣ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಹೇಮಾವತಿ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರಾದ ಚಂದ್ರಶೆಟ್ಟಿ ಹಾಗೂ ನೇತ್ರಾವತಿ ಎಂಬುವರು ರೈತರಿಂದ ಹಣ ಪಡೆದು ಕೆಲಸ ಮಾಡಿಕೊಡುತ್ತಿದ್ದಾರೆ. ಅವರನ್ನು ತೆಗೆದು ಹಾಕಬೇಕು ಎಂದರು. ಇದಕ್ಕೆ ಸಮ್ಮತಿಸಿದ ಸಚಿವರು, ಇಬ್ಬರನ್ನು ತೆಗೆದು ಹಾಕಿ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಉಪವಿಭಾಗಾಧಿಕಾರಿ ನವೀನ್ ಭಟ್‌ಗೆ ಸೂಚಿಸಿದರು.

ಗೊರೂರಿನ ಹೇಮಾವತಿ ಯೋಜನಾ ವಲಯ ವ್ಯಾಪ್ತಿಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳಿಗೆ ಕಾರ್ಯಾದೇಶ ನೀಡುತ್ತಿಲ್ಲ. ಸರಿಯಾಗಿ ಕ್ರಿಯಾ ಯೋಜನೆ ರೂಪಿಸುತ್ತಿಲ್ಲ. ಕೆಲಸ ನಡೆಯದ ಕಚೇರಿಯನ್ನು ಮುಚ್ಚಿಸಿ ಎಂದ ಶಾಸಕರಾದ ಎ.ಟಿ.ರಾಮಸ್ವಾಮಿ, ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details