ಹಾಸನ :ಕಾಂಗ್ರೆಸ್ ಪಕ್ಷ ಈಗಾಗಲೇ ಬೀದಿಗೆ ಬಂದಿದೆ. ಹಿಂದೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಿದರು. ಈಗ ಸಂಪೂರ್ಣವಾಗಿ ಮುಗಿಸೋಕೆ ಡಿಕೆಶಿ ಸೇರಿಕೊಂಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆಎಸ್ ಈಶ್ವರಪ್ಪ ವ್ಯಂಗ್ಯ ವಾಡಿದರು.
ಓದಿ: ಫೆ. 28 ಮತ್ತು ಮಾರ್ಚ್ 1ರಂದು ಶಿವಮೊಗ್ಗ ಪ್ರವಾಸ ಕೈಗೊಂಡಿರುವ ಸಿಎಂ ಬಿಎಸ್ವೈ
ಹಾಸನದ ಪ್ರವಾಸಿಮಂದಿರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರೆಸಾರ್ಟ್‌ನಲ್ಲಿ ಕುಳಿತು ರಾಜಕೀಯ ಮಾಡಲು ಹೊರಟಿದ್ದಾರೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಇಲ್ಲೇ ಗೊತ್ತಾಗುತ್ತೆ ಅವರು ಹೇಗೆ ಕಾಂಗ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು. ಹೀಗಾಗಿ, ಇವರಿಬ್ಬರೂ ಸೇರಿ ಪಕ್ಷವನ್ನು ಸಂಪೂರ್ಣ ಮುಗಿಸುತ್ತಾರೆ, ನೋಡ್ತಾ ಇರಿ ಎಂದು ಭವಿಷ್ಯ ನುಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಗೆ ಬರುವುದಕ್ಕೆ ನಾನು ಕಾರಣ ಎಂಬ ಹೇಳಿಕೆಗೆ ಮೊದಲು ನಿಮ್ಮ ಪಕ್ಷವನ್ನು ಉಳಿಸಿಕೊಳ್ಳಿ. ಆಮೇಲೆ ಬಿಜೆಪಿ ಬಗ್ಗೆ ಕುಮಾರಸ್ವಾಮಿ ಮಾತನಾಡಲಿ ಎಂದು ಟಾಂಗ್ ಕೊಟ್ಟರು.
ಇನ್ನು, ಯತ್ನಾಳ್ ಮತ್ತು ರೇಣುಕಾಚಾರ್ಯ ಪದೇಪದೆ ಪಕ್ಷ, ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು ತಪ್ಪು. ಏನೇ ಗಂಭೀರ ವಿಚಾರವಿದ್ದರೂ ನಾಲ್ಕು ಗೋಡೆಗಳ ನಡುವೆ ಕುಳಿತು ಮಾತನಾಡಿಕೊಳ್ಳುವುದು ಒಳ್ಳೆಯದು.
ಸಿದ್ದರಾಮಯ್ಯ-ಡಿಕೆಶಿಗೆ ಟಾಂಗ್ ಕೊಟ್ಟ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಯತ್ನಾಳ್ಗೆ ನೋಟಿಸ್ ಕೊಡಲಾಗಿದೆ. ಈ ಬಗ್ಗೆ ಕೇಂದ್ರದ ನಾಯಕರು ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನೋಡೋಣ ಎಂದರು. ಇನ್ನು, ಜಿಪಂ ಮತ್ತು ತಾಪಂ ಚುನಾವಣೆ ಯಾವ ಸಂದರ್ಭದಲ್ಲಾದರೂ ಘೋಷಣೆಯಾದರೂ ನಾವು ಚುನಾವಣೆಗೆ ಸಿದ್ಧರಿದ್ದೇವೆ.
ಗ್ರಾಪಂ ಚುನಾವಣೆ ಅಂತೆಯೇ ಚುನಾವಣೆಗಳನ್ನು ನಾವು ಎದುರಿಸಲು ಸಿದ್ಧವಿದ್ದೇವೆ.
ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸ ನಮಗಿದೆ ಎಂದ ಅವರು, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆಯಿಂದ ಚುನಾವಣೆಗೆ ಯಾವುದೇ ತೊಂದರೆಯಾಗುವುದಿಲ್ಲ. ಕಾರಣ ಮಾರುಕಟ್ಟೆ ದರ ಏರಿಳಿತ ಆಗುವುದು ದೇಶದ ಜನರಿಗೆ ಗೊತ್ತಿದೆ ಎಂದು ಬೆಲೆ ಏರಿಕೆ ವಿಚಾರವನ್ನು ಸಮರ್ಥಿಸಿಕೊಂಡರು.
ಮುಂಬರುವ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾರಣ ಈ ದೇಶವನ್ನು ದಿವಾಳಿ ಮಾಡಿದ ಪಕ್ಷ ಕಾಂಗ್ರೆಸ್ ಇದರ ಜೊತೆಗೆ ಮುಸ್ಲಿಂ ಲೀಗ್ ರಾಷ್ಟ್ರದ್ರೋಹಿ ಚಟುವಟಿಕೆ ಮಾಡುತ್ತಿರುವ ಹಿನ್ನೆಲೆ, ಎಂದಿಗೂ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಇದನ್ನು ಹೊರತುಪಡಿಸಿ ಯಾವುದೇ ಪಕ್ಷದ ಜೊತೆ ಸಂದರ್ಭಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದರು.