ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಹಾಸನ:ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನನ್ನ ಸ್ವ- ಕ್ಷೇತ್ರ ಮಧುಗಿರಿಗೆ ಬಂದು ಎದೆ ಬಡಿದುಕೊಂಡರು. ಆದರೂ ನನ್ನನ್ನು ಸೋಲಿಸಲಾಗಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮಾಜಿ ಪ್ರಧಾನಿಗಳ ವಿರುದ್ಧ ಹರಿಹಾಯ್ದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಮುಖಂಡರ ಹಾಗೂ ಕಾರ್ಯಕರ್ತರ ಸಭೆ, ಶಕ್ತಿ ಯೋಜನೆ ಹಾಗೂ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನನ್ನ ಕ್ಷೇತ್ರ ಮಧುಗಿರಿಗೆ ಬಂದು ಎದೆ ಬಡಿದುಕೊಂಡರು. ಆದರೂ, ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಅರಸೀಕೆರೆಯ ಶಿವಲಿಂಗೇಗೌಡರಿಗೂ ದೇವೇಗೌಡರು ಮತ್ತು ಅವರು ಮಕ್ಕಳು ರಾಹು, ಕೇತು ಆಗಿದ್ದರು. ನಾನು ಮತ್ತು ಶಿವಲಿಂಗೇಗೌಡ ಇಬ್ಬರು ಜನರ ನಡುವೆ ಇದ್ದವರು.
ಅವರು 20,093 ಮತಗಳಿಂದ ಗೆದ್ದರೆ, ನಾನು 36 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಜಿಲ್ಲೆಯಲ್ಲಿ ಜೆಡಿಎಸ್ ದಬ್ಬಾಳಿಕೆಗೆ ಹೆದರಿ ಮತ ನೀಡಿದ್ದಾರೆ. ಕಡಿಮೆ ಮತಗಳ ಅಂತರದಿಂದ ಕೆಲವರು ಗೆದ್ದಿರುವುದನ್ನು ನೋಡಿ ಜನ ಈಗ ಯಾರಿಗೂ ಹೆದರುವುದಿಲ್ಲ ಎಂದು ಜೆಡಿಎಸ್ ಶಾಸಕರ ಬಗ್ಗೆ ವ್ಯಂಗ್ಯವಾಡಿದರು. ನಮಗೆ ದೊಡ್ಡವರ ಬಗ್ಗೆ ಮಾತು ಬೇಡ. ಮಧ್ಯಮ ವರ್ಗ ಹಾಗೂ ಸಣ್ಣ ಸಮಾಜವನ್ನು ನೋಡಬೇಕು. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ಭೇಟಿ ನೀಡುವೆ. ಎಲ್ಲ ಮುಖಂಡರ ಜೊತೆ ವೈಯಕ್ತಿಕವಾಗಿ ಮಾತನಾಡಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.
ಜಿಲ್ಲೆಯ ಕಾರ್ಯಕರ್ತರು ಹಾಗೂ ಮುಖಂಡರು ಸಹಕಾರಿ ಬ್ಯಾಂಕುಗಳಲ್ಲಿ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಅದನ್ನು ಸರಿಪಡಿಸುವೆ. ಸಾಲ ಪಡೆಯಲು ಅರ್ಹತೆ ಇರುವವರಿಗೆ ಸಾಲ ನೀಡಬೇಕು. ಸಹಕಾರಿ ಬ್ಯಾಂಕುಗಳು ಯಾವುದೇ ಪಕ್ಷ ಹಾಗೂ ವ್ಯಕ್ತಿಯದ್ದಲ್ಲ ಎಂದು ಪರೋಕ್ಷವಾಗಿ ದೇವೇಗೌಡರ ಕುಟುಂಬದ ವಿರುದ್ಧ ಕಿಡಿಕಾರಿದರು.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಕನಿಷ್ಠ 20 ಕ್ಷೇತ್ರವನ್ನಾದರೂ ಗೆಲ್ಲುವ ನಿರೀಕ್ಷೆ ಇದೆ. ವಿಧಾನಸಭೆಯ ರೀತಿ ಲೋಕಸಭೆಯಲ್ಲಿಯೂ ಪಕ್ಷ ಜಯಭೇರಿ ಬಾರಿಸಲು ಕಾರ್ಯಕರ್ತರು ಶ್ರಮಿಸಬೇಕು. ಹಾಸನ ಜಿಲ್ಲೆಯ ಕಾರ್ಯಕರ್ತರು - ಮುಖಂಡರು ಚುನಾವಣೆಯಲ್ಲಿ ಸೋತ ಕಾರಣ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ಧೈರ್ಯ ತುಂಬಿದರು.
ಮುಂದೆ ಬರುವ ಜಿಪಂ ಮತ್ತು ತಾಪಂ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗಳಿಸಲು ಸಂಕಲ್ಪ ಮಾಡಬೇಕು. ರಾಜ್ಯದಲ್ಲಿ ಶೇ.99ರಷ್ಟು ಮುಸ್ಲಿಂ ಸಮುದಾಯದವರು ನಮಗೆ ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರ ಭಾವನಗಳಿಗೆ ಧಕ್ಕೆ ಬಾರದಂತೆ ನಾನು ಕೆಲಸ ಮಾಡುವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ತಾವೇ ಹೇಳಿದಂತೆ ಉದ್ಯೋಗ ಕೊಡಲಿಲ್ಲ. ಅದನ್ಯಾರು ಕೇಳುತ್ತಿಲ್ಲ. ಆದರೆ, ಕೆಲಸ ಮಾಡುವವರನ್ನು ಮಾತ್ರ ಏನು ಮಾಡಲಿಲ್ಲ ಎಂದು ಕೇಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 123 ಸೀಟು ಬರಲಿಲ್ಲ ಎಂದರೆ ಪಕ್ಷವನ್ನು ವಿಸರ್ಜನೆ ಮಾಡುವೆ ಎಂದಿದ್ದರು. ಹೇಳಿದಂತೆ ಮಾಡಿದ್ರಾ? ಕುಮಾರಸ್ವಾಮಿ ಒಂದೊಂದು ಬಾರಿ ಒಂದೊಂದು ಬಣ್ಣ ಹಾಕುತ್ತಾರೆ. ಕಳೆದ ಬಾರಿ ಕಾಂಗ್ರೆಸ್ ಜೊತೆ ಇದ್ದರು. ಈ ಬಾರಿ ಬಿಜೆಪಿ ಜೊತೆ ಹೋಗಬಹುದು ಎಂದು ವ್ಯಂಗ್ಯವಾಡಿದರು.
ಚುನಾವಣೆಯಲ್ಲಿ ಅವರ ಪಕ್ಷದ ಹಡಗು ಮುಳುಗಿ ಹೋಗಿದೆ. ಹೀಗಾಗಿ ಹತಾಶೆಯಿಂದ ಸಾರಿಗೆ ಇಲಾಖೆ ಮುಳುಗುತ್ತೆ ಅಂತ ಹೇಳುತ್ತಿದ್ದಾರೆ. ಮೊದಲೇ ಹೇಳಿದಂತೆ ಶಕ್ತಿ ಯೋಜನೆ ಈಗಾಗಲೇ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಂತೆ ಮೊದಲ ಯೋಜನೆ ಜಾರಿ ಮಾಡಿದ್ದಾರೆ. ಸಾರಿಗೆ ಇಲಾಖೆಯ ಎಲ್ಲ ಅಧಿಕಾರಿಯ ಸಲಹೆ ಮತ್ತು ಸೂಚನೆ ಮೇರೆಗೆ ಚಾಲನೆ ನೀಡಿದ್ದಾರೆ ಎಂದು ತಮ್ಮ ಪಕ್ಷದ ಸಾಧನೆ ಹೇಳಿಕೊಂಡರು. ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಗೈರು ವಿಚಾರ ಕೂಡ ಮಾತನಾಡಿದರು.
ಇದನ್ನೂ ಓದಿ:Congress guaranty: ಶಕ್ತಿ ಯೋಜನೆಯಡಿ ಚಾಮರಾಜನಗರದಲ್ಲಿ ನಿತ್ಯ 80 ಸಾವಿರ ಮಹಿಳೆಯರ ಓಡಾಟ ನಿರೀಕ್ಷೆ!