ಹಾಸನ: ಜಿಲ್ಲೆಯ ಶಾಸಕರು ಹಾಗೂ ಸಚಿವರು ಒಮ್ಮತದಿಂದ ತೆಗೆದುಕೊಂಡಿದ್ದ ಲಾಕ್ಡೌನ್ ನಿರ್ಣಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ವಾಪಸ್ ಪಡೆದುಕೊಂಡಿದ್ದಾರೆ.
ಬುಧವಾರ ನಡೆದ ಕೋವಿಡ್ ತುರ್ತು ಸಭೆಯಲ್ಲಿ ತೆಗೆದುಕೊಂಡ ನಾಲ್ಕು ದಿನಗಳ ಲಾಕ್ಡೌನ್ ಆದೇಶವನ್ನು ಕೇವಲ 2 ಗಂಟೆಯಲ್ಲೇ ವಾಪಸ್ ಪಡೆಯಲಾಗಿದೆ. ಹಾಸನದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಬೇಲೂರು ಶಾಸಕ ಲಿಂಗೇಶ್, ಸಕಲೇಶಪುರ ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಸಮ್ಮುಖದಲ್ಲಿ ನಾಲ್ಕು ದಿನಗಳ ಲಾಕ್ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಈ ಆದೇಶವನ್ನು ಕೇವಲ 2 ಗಂಟೆಯಲ್ಲೇ ವಾಪಸ್ ಪಡೆಯಲಾಗಿದೆ.