ಹಾಸನ:ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನದ ಜೊತೆಗೆ ಹಾಸನ ಜಿಲ್ಲೆಯ ಉಸ್ತುವಾರಿಯನ್ನೂ ನೀಡಿದ್ದಾರೆ. ಹೀಗಾಗಿ ನಾನು ಉತ್ತಮ ಕೆಲಸ ಮಾಡಿ, ಅವರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಹಾಸನ ಜಿಲ್ಲೆ ಈಗಾಗಲೇ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇನ್ನೂ ಸಾಕಷ್ಟು ಕೆಲಸಗಳು ಬಾಕಿಯಿವೆ. ಎಲ್ಲಾ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಅವುಗಳನ್ನೂ ಪೂರ್ಣ ಮಾಡುವುದಾಗಿ ಸಚಿವರು ತಿಳಿಸಿದರು.
ನಾನು ರೈತ ಕುಟುಂಬದಿಂದ ಬಂದಿದ್ದೇನೆ. ಜಿಲ್ಲೆಯ ಆಲೂಗಡ್ಡೆ, ತೆಂಗು ಬೆಳೆಗಾರರ ಸಮಸ್ಯೆ ಅರಿತಿದ್ದೇನೆ. ಮುಖ್ಯಮಂತ್ರಿ ಜತೆಗೆ ಚರ್ಚಿಸಿ ನಷ್ಟಕ್ಕೀಡಾಗಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡುತ್ತೇನೆ. ಇನ್ನೊಂದು ವಾರದಲ್ಲಿ ಕೆಡಿಪಿ ಸಭೆ ಕರೆದು ಎಲ್ಲ ಸಮಸ್ಯೆ ಪರಿಹರಿಸುತ್ತೇನೆ ಎಂದರು.
ಇನ್ನು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ವರದಿಯಾಗದೆ, ಎಲ್ಲರೂ ನೆಮ್ಮದಿಯಾಗಿದ್ದೆವು. ಆದರೆ, ಹೊಟ್ಟೆ ಪಾಡಿಗಾಗಿ ಮುಂಬೈಗೆ ತೆರಳಿದ್ದ ನಮ್ಮವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರೆಲ್ಲರನ್ನೂ ಕಾಪಾಡುವುದು ನಮ್ಮ ಜವಾಬ್ದಾರಿ. ಆದ್ದರಿಂದ ಮೊದಲ ಆದ್ಯತೆ ಕೊರೊನಾ ಹಿಮ್ಮೆಟ್ಟಿಸುವುದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ನಿರಂತರ ಸಭೆಗಳ ಮೂಲಕ ಎಲ್ಲ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.