ಕರ್ನಾಟಕ

karnataka

ETV Bharat / state

8 ಕೋಟಿ ಕಿಕ್ ಬ್ಯಾಕ್ ಪಡೆದ ಆರೋಪ ಶುದ್ಧ ಸುಳ್ಳು: ಸಚಿವ ಕೆ ಗೋಪಾಲಯ್ಯ

ಅಬಕಾರಿ ಇಲಾಖೆಗೆ ಕಾನೂನಿನಲ್ಲಿ ಏನು ಅವಕಾಶವಿದೆ ಅದನ್ನು ಮಾತ್ರ ಮಾಡಬಹುದು. ಕಾನೂನನ್ನು ಬಿಟ್ಟು ಯಾರು ಏನು ಮಾಡಲು ಆಗುವುದಿಲ್ಲ. ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್ ಬ್ಯಾಕ್ ಆರೋಪ ಶುದ್ಧ ಸುಳ್ಳು ಅಂತ ಅಬಕಾರಿ ಸಚಿವ ಕೆ ಗೋಪಾಲಯ್ಯ ಹೇಳಿದರು.

k gopalaiah
ಸಚಿವ ಕೆ ಗೋಪಾಲಯ್ಯ

By

Published : Oct 14, 2022, 10:34 AM IST

ಹಾಸನ: ನಾನು ಯಾರ ಮೇಲೂ ಒತ್ತಡ ಹಾಕಿಲ್ಲ. ಕಾನೂನು ಬಿಟ್ಟು ಯಾವುದೇ ಕೆಲಸವನ್ನ ಮಾಡಿಲ್ಲ. ನನ್ನ ಮೇಲೆ ಬಂದಿರೋ ಗೋವಾ ಬಂದರು ಮೂಲಕ ಕಾಕಂಬಿ ರಫ್ತಿನ ಅನುಮತಿಗೆ 8 ಕೋಟಿ ಕಿಕ್ ಬ್ಯಾಕ್ ಆರೋಪ ಶುದ್ಧ ಸುಳ್ಳು ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ಸ್ಪಷ್ಟನೆ ನೀಡಿದ್ದಾರೆ.

ನಗರದ ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಕಾಕಂಬಿಯನ್ನ ಹೊರ ರಾಜ್ಯಕ್ಕೂ ಕೊಡಲು ಸ್ಥಳೀಯ ಕಂಪನಿಯನ್ನು ಹೊರಗಿಟ್ಟು ಗೋವಾ ಬಂದರಿನ ಮೂಲಕ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದ್ರೆ, ರಾಜ್ಯ ಮತ್ತು ಹೊರ ರಾಜ್ಯಕ್ಕೂ ಕೊಡಲು ಕಾನೂನಿನಲ್ಲಿ ಅವಕಾಶವಿದೆ. ಇಲ್ಲಿಯವರೆಗೂ ನನ್ನ ಕಚೇರಿಯಿಂದ ಆ ರೀತಿ ಅಕ್ರಮವಾಗಿಲ್ಲ. ಅಬಕಾರಿ ಇಲಾಖೆಗೆ ಕಾನೂನಿನಲ್ಲಿ ಏನು ಅವಕಾಶವಿದೆ ಅದನ್ನು ಮಾತ್ರ ಮಾಡಬಹುದು. ಈ ಬಗ್ಗೆ ಅಧಿಕಾರಿಗಳ ಮೇಲೆ ಯಾವ ಒತ್ತಡ ಹಾಕಿಲ್ಲ. ಕಾನೂನನ್ನು ಬಿಟ್ಟು ಯಾರು ಏನು ಮಾಡಲು ಆಗುವುದಿಲ್ಲ ಎಂದರು.

ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಕೆ ಗೋಪಾಲಯ್ಯ

ಇದನ್ನೂ ಓದಿ:ರಾಜ್ಯಾದ್ಯಂತ ಮದ್ಯ ಮಾರಾಟ ಸಂಪೂರ್ಣ ನಿಷೇಧ : ಅಬಕಾರಿ ಸಚಿವ ಕೆ. ಗೋಪಾಲಯ್ಯ

ನಾನು ಕಳೆದ ಮೂರು ದಿನದಿಂದ ಪ್ರವಾಸದಲ್ಲಿದ್ದೇನೆ. ಮತ್ತೆ ನಾನು ಬೆಂಗಳೂರಿಗೆ ಹೋಗೋದು ಅ.16 ರಂದು. ನನ್ನಿಂದ ಯಾವುದು ಅಪ್ರೂವಲ್ ಆಗಿ ಈ ಕ್ಷಣದ ವರೆಗೂ ಹೋಗಿಲ್ಲ. ಆದ್ರೆ, ಈ ರಾಜ್ಯದವರಿಗೆ, ಹೊರ ರಾಜ್ಯದವರಿಗೂ ಕೊಡಲು ಕಾನೂನಿನಲ್ಲಿ ಅವಕಾಶವಿದೆ. ನನ್ನ ಮೇಲೆ ಬಂದಿರುವ ಆರೋಪ ಶುದ್ಧ ಸುಳ್ಳು. ಇದು ಆಧಾರ ರಹಿತ ಆರೋಪವಾಗಿದ್ದು, ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ತೆಗೆದುಕೊಳ್ಳುತ್ತೇನೆ. ನನ್ನ ಬಳಿ ಯಾವ ಫೈಲು ಬಂದಿಲ್ಲ. ಕಾನೂನು ಬಿಟ್ಟು ನನ್ನ ಇಲಾಖೆಯಲ್ಲಿ ನಾನಾಗಲಿ, ಅಧಿಕಾರಿಗಳಾಗಲಿ ಈ ರೀತಿ ಮಾಡಲು ಸಾಧ್ಯವಿಲ್ಲ. ಕಾನೂನು ಏನು ಹೇಳುತ್ತದೆ ಅದಕ್ಕೆ ನಾನು ಮತ್ತು ಅಧಿಕಾರಿಗಳು ತಲೆ ಬಾಗ್ತಿವಿ ಎಂದು ಹೇಳಿದರು.

ಪ್ರಧಾನಿ ಮೋದಿ ವಿಶ್ವ ಗುರುವಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಉತ್ತರಿಸಿದ ಸಚಿವರು, ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆದ ಮೇಲೆ ವಿಶ್ವದ ಬೇರೆ ಬೇರೆ ರಾಜ್ಯಗಳು ಇವತ್ತು ಪ್ರಧಾನಿಯವರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದಾರೆ. ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಇಂದು ವಿಶ್ವದ ಭೂಪಟದಲ್ಲಿ ಭಾರತಕ್ಕೆ ದೊಡ್ಡ ಸ್ಥಾನ ತಂದುಕೊಟ್ಟವರು ನಮ್ಮ ಪ್ರಧಾನಿ. ಚುನಾವಣಾ ವೇಳೆ ಮಾತುಕೊಟ್ಟಂತೆ ಮೋದಿಯವರು ನಡೆದುಕೊಂಡಿದ್ದಾರೆ. ದೇಶದಲ್ಲಿ 135 ಕೋಟಿ ಜನ ಇದ್ದು, ಕೊರೊನಾ ಸಂದರ್ಭದಲ್ಲಿ ವಿಶೇಷವಾದ ಕಾಳಜಿ ಇಟ್ಟುಕೊಂಡು ಆಹಾರ ಕೊಡುವ ಕೆಲಸವನ್ನ ಉತ್ತಮವಾಗಿ ಮಾಡಿದ್ದಾರೆ. 80 ಕೋಟಿ ಜನರಿಗೆ ಇಂದು ಕೂಡ ಆಹಾರ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ:ಅ. 13 ರಿಂದ ಹಾಸನಾಂಬ ದೇವಿ ಜಾತ್ರೆ ಆರಂಭ

ಕಳೆದ ವರ್ಷದಂತೆಯೇ ಈ ವರ್ಷವೂ ಹಾಸನಾಂಬೆ ಬಾಗಿಲು ತೆಗೆದಾಗ ದೀಪ ಉರಿಯುತ್ತಿತ್ತು. ಹೂವು ಬಾಡಿರಲಿಲ್ಲ. ಹಾಸನಾಂಬೆಯಿಂದಲೇ ಹಾಸನಕ್ಕೆ ಹೆಸರು ಬಂತು. ಈ ವರ್ಷ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಶಾಸಕರು, ಜಿಲ್ಲಾಡಳಿತ ಅಚ್ಚುಕಟ್ಟಾಗಿ ಮಾಡಿದ್ದಾರೆ. ಈ ಬಾರಿ 5-6 ಲಕ್ಷಕ್ಕೂ ಹೆಚ್ಚಿನ ಭಕ್ತರು ದೇವಾಲಯಕ್ಕೆ ಬರುವ ನಿರೀಕ್ಷೆಯಿದೆ. ಕಳೆದೆರಡು ವರ್ಷದಿಂದ ಭಕ್ತರಿಗೆ ದೇವಿ ದರ್ಶನ ಇರಲಿಲ್ಲ. ಈ ವರ್ಷ ದೇವಿ ದರ್ಶನ ಪಡೆಯಲು ಎಲ್ಲಾರಿಗೂ ಅವಕಾಶ ಕಲ್ಪಿಸಲಾಗಿದೆ. ಎಲ್ಲಾರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಹಾಸನಾಂಬೆಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.

ABOUT THE AUTHOR

...view details