ಹಾಸನ: ಹೇಮಾವತಿ ಜಲಾಶಯ ಹಗರಣದಲ್ಲಿ ಯಾರೇ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭಾಗಿಯಾಗಿದ್ರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಭರವಸೆ ಕೊಟ್ಟರು.
ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಖಚಿತ- ಸಚಿವ ಕೆ. ಗೋಪಾಲಯ್ಯ ನಗರದ ಹೊರ ವಲಯದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಹೇಮಾವತಿ ಜಲಾಶಯ ಭೂಮಿ ಹಂಚಿಕೆ ಅಕ್ರಮ ವಿಚಾರವಾಗಿ ಅವರು ಮಾತನಾಡಿದರು.
'ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತನಿಖೆ ಪ್ರಾರಂಭವಾಗಿದೆ. ತನಿಖೆ ಮುಗಿಯುವ ಹಂತದಲ್ಲಿದ್ದು, ಕೆಲವು ತಿಂಗಳುಗಳಲ್ಲೇ ಪಟ್ಟಿ ಬಿಡುಗಡೆಯಾಗುತ್ತದೆ. ಯಾರಾದರೂ ಒಂದು ಕುಟುಂಬಕ್ಕೆ ಮೂರ್ನಾಲ್ಕು ಹಕ್ಕು ಪತ್ರದಲ್ಲಿ ಭೂಮಿ ಪಡೆದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇದೊಂದು ದೊಡ್ಡ ಹಗರಣ. ಈ ಹಗರಣದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳಿರಲಿ, ರಾಜಕಾರಣಿಗಳಾಗಲಿ ಭಾಗಿಯಾಗಿದ್ದರೆ ಅವರ ಮೇಲೆ ಕಠಿಣ ಕ್ರಮವನ್ನು ಕೆಲವೇ ದಿನಗಳಲ್ಲಿ ನಮ್ಮ ಸರ್ಕಾರ ತೆಗೆದುಕೊಳ್ಳಲಿದೆ' ಎಂದರು.
ಹಾಸನಾಂಬೆ ದೇವಿ ಜಾತ್ರೆ:
'ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಸಾರ್ವಜನಿಕರಿಗೆ ಹಾಸನಾಂಬೆ ದೇವಿ ದರ್ಶನ ಮಾಡಲು ಪ್ರೊಜೆಕ್ಟರ್ ಮೂಲಕ ಮತ್ತು ಆನ್ಲೈನ್ ಮೂಲಕ ಅವಕಾಶ ಕಲ್ಪಿಸಿಕೊಡಲಾಗುವುದು. ಆದರೆ ದೇವಾಲಯಕ್ಕೆ ಬರಲು ಅವಕಾಶ ಇರುವುದಿಲ್ಲ. ವಿಐಪಿಗಳಿಗೂ ಯಾವ ಪಾಸ್ ವ್ಯವಸ್ಥೆ ಇರುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
'ನಾವು ರಾಜೀನಾಮೆ ಕೊಟ್ಟು ಬಂದ ಮೇಲೆ ಸಾಕಷ್ಟು ಚುನಾವಣೆಗಳು ನಡೆದಿವೆ. ಎರಡೋ ಮೂರೋ ಬಿಟ್ರೆ ಇನ್ನೆಲ್ಲವನ್ನೂ ನಾವು ಗೆದ್ದಿದ್ದೇವೆ' ಎಂದು ಹೇಳಿದರು.
'ಇಡೀ ದೇಶದಲ್ಲಿ ಬಿಜೆಪಿಗೆ ಕಾಂಗ್ರೆಸ್ ಎದುರಾಳಿ ಎಂಬುದು ಎಲ್ಲರಿಗೂ ಗೊತ್ತು. ಮೋದಿಯವರು ಪ್ರಧಾನಿ ಆದ ಮೇಲೆ ಕಾಂಗ್ರೆಸ್ ಪಕ್ಷದ ಸ್ಥಿತಿ ಹೇಗಾಗಿದೆ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ಮೋದಿಯವರಿಗೆ ಏಕೆ ರಾಷ್ಟ್ರದ ಜನತೆ ಮತ ಕೊಡುತ್ತಾರೆ ಎಂಬುದಕ್ಕೆ ಎರಡು ಚುನಾವಣೆಯಲ್ಲಿ ತೋರಿಸಿಕೊಡಲಾಗಿದೆ. ಮುಂಬರುವ ಚುನಾವಣೆಗಳಲ್ಲಿ ಮೋದಿಯವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದ್ದು, ಅತ್ಯಂತ ಹೆಚ್ಚಿನ ಮತಗಳೊಂದಿಗೆ ಗೆಲುವು ಸಾಧಿಸಲಿದೆ. ಇನ್ನು, ಚುನಾವಣೆ ವೇಳೆ ಬೇರೆ ಬೇರೆ ಪಕ್ಷಗಳು ಅಪವಾದ ಮಾಡುವುದು ಸಾಮಾನ್ಯವಾಗಿದೆ. ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೂ ಉತ್ತಮ ಕೆಲಸಗಳು ಆಗಿದೆ' ಎಂದು ಅವರು ತಿಳಿಸಿದರು.
ಇದನ್ನೂ ಓದಿ:ಅದ್ಧೂರಿ ರಾಜ್ಯೋತ್ಸವ ಆಚರಣೆ ಕುರಿತು ಇನ್ನೂ ತೀರ್ಮಾನವಾಗಿಲ್ಲ: ಸಿಎಂ ಬೊಮ್ಮಾಯಿ
'ಸಿಎಲ್ 7 ಪರವಾನಗಿ ಅರ್ಜಿ ಸಲ್ಲಿಸಿದ್ದು, ಅರ್ಹತೆ ನೋಡಿ ಪರವಾನಗಿ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡಿ ಏನಾದರೂ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದರೆ ಆ ಜಿಲ್ಲೆಯಲ್ಲಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಮತ್ತು ಉಲ್ಲಂಘನೆ ಆಗಿರುವ ಬಗ್ಗೆ ಮಾಹಿತಿ ನೀಡಿದರೆ 24 ಗಂಟೆಯೊಳಗೆ ಮೇಲಧಿಕಾರಿಗಳಿಂದ ತನಿಖೆ ಮಾಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು' ಎಂದು ಸಚಿವ ಗೋಪಾಲಯ್ಯ ಎಚ್ಚರಿಸಿದರು.