ಹಾಸನ:ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರ ಮೂಲಕ ಹೆಚ್ಚಿನ ಕಾಳಜಿ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನವರಿ 24ರಂದು ನಡೆಯಲಿರುವ ತ್ರೈಮಾಸಿಕ ಕೆಡಿಪಿ ಸಭೆಗೆ ಪೂರಕವಾಗಿ ಅಧಿಕಾರಿಗಳ ಸಭೆ ನಡೆಸಿದ ಅವರು, ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ತಲುಪಿಸುವಂತೆ ನಿರ್ದೇಶನ ನೀಡಿದರು.
ಪ್ರಧಾನಮಂತ್ರಿ ಕೃಷಿಕ್ ಸಮ್ಮಾನ್ ಯೋಜನೆ ಹಾಗೂ ರಾಜ್ಯ ಸರ್ಕಾರದ ನೆರವು ಯೋಜನೆಗಳನ್ನು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಬೆಳೆ ಪದ್ಧತಿ, ರಸಗೊಬ್ಬರ, ವಿಮೆ ಯೋಜನೆ ಸೇರಿ ಎಲ್ಲಾ ಕಾರ್ಯಕ್ರಮಗಳ ಸರಿಯಾದ ಮಾಹಿತಿ ಹಾಗೂ ಜಾಗೃತಿಯನ್ನು ರೈತರಿಗೆ ಮೂಡಿಸಬೇಕು ಎಂದರು. ಎಲ್ಲಾ ಇಲಾಖೆಗಳು ಶೀಘ್ರ ಆರ್ಥಿಕ, ಭೌತಿಕ ಗುರಿ ಪೂರ್ಣಗೊಳಿಸಬೇಕು. ಹಣ ಸಂಪೂರ್ಣ ಸದ್ಬಳಕೆಯಾಗಬೇಕು. ವಿಶೇಷ ಘಟಕ ಯೋಜನೆ ಹಾಗೂ ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ಕಂಡು ಬಂದರೆ ಕ್ರಮವಹಿಸಲಾಗುವುದು ಎಂದರು.
ಅಧಿಕಾರಿಗಳ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸಭೆ.. ಸಾಮಾಜಿಕ ಭದ್ರತಾ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪಬೇಕು. ಅರ್ಜಿ ವಿಲೇವಾರಿ ವಿಳಂಬವಾಗಬಾರದು. ಎಲ್ಲಾ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೆಚ್ಚಿನ ಪಿಂಚಣಿ ಅದಾಲತ್ ಹಾಗೂ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಎಲ್ಲಾ ಹೋಬಳಿಗಳಲ್ಲಿ ಕಂದಾಯ ಅದಾಲತ್ ನಡೆಸಬೇಕು ಎಂದು ಸೂಚಿಸಿದರು.
ಆರೋಗ್ಯ ಇಲಾಖೆಯಲ್ಲಿ ವೈದ್ಯಕೀಯ ಸೌಲಭ್ಯಗಳು ಸುಧಾರಣೆಯಾಗಬೇಕು. ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳನ್ನು ಆದಷ್ಟು ಬೇಗ ತುಂಬಬೇಕು. ಯಾವುದೇ ಗರ್ಭಿಣಿ, ಬಾಣಂತಿಯರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳಿಸದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡಬೇಕು. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನದ ಪ್ರಗತಿ ಚುರುಕಾಗಬೇಕು. ಹಾಗೂ ಎಲ್ಲಾ ಬಿಪಿಎಲ್ ಕುಟುಂಬಗಳಿಗೂ ಆರೋಗ್ಯ ಕಾರ್ಡ್ ತಲುಪಬೇಕು ಎಂದರು.
ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳಲ್ಲಿ ಇರುವ ಹೆರಿಗೆ, ಗರ್ಭಿಣಿ, ಬಾಣಂತಿಯರ ವಿವರಗಳು ಪರಸ್ಪರ ಹೊಂದಾಣಿಕೆಯಾಗಬೇಕು. ಅದರಂತೆ ಸರ್ಕಾರದ ಎಲ್ಲಾ ಸೌಲಭ್ಯಗಳು ತಲುಪಬೇಕು ಎಂದರು. ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ ಚುರುಕು ಮಾಡಿ, ವಸತಿ ಯೋಜನೆಗಳನ್ನು ಅವಧಿಯೊಳಗೆ ಮುಗಿಸಬೇಕು ಎಂದು ಹೇಳಿದರು. ಬರ ನಿರ್ವಹಣೆ ಬಗ್ಗೆ ಈಗಲೇ ಸಿದ್ಧತೆ ನಡೆಸಿ, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಗೆ ತೊಂದರೆಯಾಗದಂತೆ ನಿಗಾವಹಿಸಿ ಎಂದು ಹೇಳಿದರು.
ಶಾಲಾ ಕೊಠಡಿಗಳ ದುರಸ್ಥಿ ಕಾರ್ಯ ಕೂಡಲೇ ಪೂರ್ಣಗೊಳಿಸಬೇಕು. ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಕಳೆದ ಬಾರಿ ಮೊದಲ ಸ್ಥಾನ ಪಡೆದಿದೆ. ಈ ಬಾರಿಯೂ ಆ ಸ್ಥಾನ ಉಳಿಸಿಕೊಳ್ಳಲು ಅಧಿಕಾರಿಗಳು ಶ್ರಮವಹಿಸುವಂತೆ ಸೂಚಿಸಿದರು. ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪಂಚಾಯತ್ ಸಿಇಒ ಬಿ ಎ ಪರಮೇಶ್ ಅವರು ಸಹ ಸಭೆಯಲ್ಲಿ ಯೋಜನೆಗಳ ಅನುಷ್ಠಾನ ಕುರಿತಂತೆ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.