ಹಾಸನ: ದ್ವೇಷದ ರಾಜಕಾರಣ ಮಾಡುತ್ತಿರುವ ಸಿಎಂ ಯಡಿಯೂರಪ್ಪ ಅವರು ಮೈತ್ರಿ ಸರ್ಕಾರದ ಕಾಮಗಾರಿಗಳನ್ನು ತಡೆ ಹಿಡಿದಿದ್ದು ಹಾಗೂ ಕಾಲೇಜು ಸೀಟು ಕಡಿಮೆ ಮಾಡಿ ಮೂಲಭೂತ ಸೌಕರ್ಯವಿಲ್ಲ ಎಂದು ಕಾಲೇಜು ಮುಚ್ಚಲು ಹೊರಟಿರುವುದನ್ನು ಖಂಡಿಸಿ ಹಾಸನದಲ್ಲಿ ನಂತರ ಸಿಎಂ ಮನೆ ಮುಂದೆ ಧರಣಿ ಮಾಡುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಕೆ ರವಾನಿಸಿದ್ದಾರೆ.
ಸಿಎಂ ಯಡಿಯೂರಪ್ಪನವರದ್ದು ದ್ವೇಷದ ರಾಜಕಾರಣ: ಸಚಿವ ಹೆಚ್.ಡಿ. ರೇವಣ್ಣ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಆಡಳಿತಾವಧಿಯಲ್ಲಿನ ಕೆಲ ಕಾಮಗಾರಿಗಳನ್ನು ನಿಲ್ಲಿಸಿರುವ ಬಗ್ಗೆ ಎರಡು, ಮೂರು ಬಾರಿ ಎಲ್ಲಾ ಶಾಸಕರು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಯಾವ ಪ್ರತಿಕ್ರಿಯೆ ಬಂದಿಲ್ಲ. ದುರುದ್ದೇಶದ ಪೂರಕವಾಗಿ ದ್ವೇಷದ ರಾಜಕಾರಣ ಮಾಡಿಕೊಂಡು ಕಾಮಗಾರಿಯನ್ನು ಸಿಎಂ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಹಾಸನದಲ್ಲಿ ಧರಣಿ ಮಾಡಿ ನಂತರ ಹಾಸನ ಜಿಲ್ಲೆಯ ಶಾಸಕರು, ಲೋಕಸಭಾ ಸದಸ್ಯರು ಹಾಗೂ ಹೆಚ್.ಡಿ.ದೇವೇಗೌಡರು, ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ತಾಲೂಕು ಪಂಚಾಯತ್ ಸದಸ್ಯರು ಎಲ್ಲಾ ಸೇರಿ ಮುಖ್ಯಮಂತ್ರಿ ಮನೆ ಮುಂದೇನೆ ಧರಣಿ ಮಾಡಲಾಗುವುದು ಎಂದು ರೇವಣ್ಣ ಎಚ್ಚರಿಸಿದರು.
ದೇವೇಗೌಡರು ವ್ಯಾಸಂಗ ಮಾಡಿದ ಹಾಸನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 150 ಸೀಟು ಕಡಿಮೆ ಮಾಡಿದ್ದಾರೆ. ಮೂಲಭೂತ ಸೌಕರ್ಯ ಇಲ್ಲದೆ ಅನುಮತಿ ಕೊಡುತ್ತಿಲ್ಲ ಎಂದು ಈಗ ಕಾಲೇಜನ್ನೇ ಮುಚ್ಚಲು ಮುಂದಾಗಿದ್ದಾರೆ. ರಾಜ್ಯದಲ್ಲಿರುವ ಸರ್ಕಾರಿ 33 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಇಲ್ಲಾ ಎಂದು ಕಾಲೇಜು ಮುಚ್ಚಲು ಮುಂದಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇವೆಲ್ಲಾ ಸೇರಿಸಿ ಒಂದು ಧರಣಿ ಮಾಡಬೇಕೆಂದು ನಿರ್ಣಯ ಮಾಡಿರುವುದಾಗಿ ಹೇಳಿದ ಅವರು ಸಚಿವ ಸಂಪುಟ ವಿಸ್ತರಿಸಲು ಹೋಗಿ ಈ ಸರ್ಕಾರ ಪಾಲಿಟೆಕ್ನಿಕ್ ಕಾಲೇಜುಗಳನ್ನು ಮುಚ್ಚುತ್ತಿದೆ ಎಂದು ದೂರಿದರು. ಯಡಿಯೂರಪ್ಪರವರಿಗೆ ಶಿವಮೊಗ್ಗದಲ್ಲಿ ಕಾಲೇಜು ನಿರ್ಮಿಸಿದ ದೊರೆಸ್ವಾಮಿ ಕೈಯಲ್ಲಿ ಕಾಲೇಜು ಆಡಳಿತವಿದೆ. ಈ ರಾಜ್ಯದ ಕಾಲೇಜುಗಳನ್ನು ಉನ್ನತ ಶಿಕ್ಷಣದ ದೊರೆಸ್ವಾಮಿಗೆ ಪಾಲಿಟೆಕ್ನಿಕ್ ಕಾಲೇಜನ್ನು ಬಳುವಳಿ ಕೊಡುವ ಸ್ಥಿತಿಗೆ ನಮ್ಮ ರಾಜ್ಯ ಬಂದಿದೆ ಎಂದು ಸಿಎಂ ವಿರುದ್ದ ರೇವಣ್ಣ ವಾಗ್ದಾಳಿ ನಡೆಸಿದರು.
ಉಚಿತ ಸರ್ಕಾರಿ ಸೀಟುಗಳಿಗೆ 60 ರಿಂದ 70 ಲಕ್ಷ ರೂ.ಗಳನ್ನು ಕೊಟ್ಟು ಶಿಕ್ಷಣ ಪಡೆಯುವ ಸ್ಥಿತಿಗೆ ಬಂದಿದೆ ರಾಜ್ಯದ ಶಿಕ್ಷಣ ಎಂದರು. ಖಾಸಗಿಯವರೊಂದಿಗೆ ಈ ಸರ್ಕಾರ ಶಾಮೀಲಾಗಿದೆ. ಮುಖ್ಯಮಂತ್ರಿಯವರು ದ್ವೇಷದ ರಾಜಕಾರಣ ಮಾಡೊಲ್ಲಾ ಅಂತಾರೆ. ಆದ್ರೆ ಹಾಸನದ ಮೊಸಳೆಹೊಸಳ್ಳಿ ಕಾಲೇಜು ಮುಚ್ಚಲು ಮುಂದಾಗಿದ್ದಾರೆ. ನಮ್ಮನ್ನು ಡಿಸ್ಟರ್ಬ್ ಮಾಡಬೇಕೆಂದು ಪಾಲಿಟೆಕ್ನಿಕ್ ಕಾಲೇಜು ಮುಚ್ಚಲು ಮುಂದಾಗಿದ್ದಾರೆ. ಈ ಬಗ್ಗೆ ನಾವು ಹೋರಾಟ ಮಾಡ್ತೀವಿ ಎಂದು ಹೆಚ್ ಡಿ ರೇವಣ್ಣ ತಿಳಿಸಿದರು.