ಹಾಸನ: ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಗೊರೂರಿನ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದರು.
ಗೊರೂರಿನ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಚಿವ ಕೆ.ಗೋಪಾಲಯ್ಯ ಜಿಲ್ಲೆಯ ಅರಕಲಗೂಡು ಸಮೀಪದ ಗೊರೂರಿನ ಹೇಮಾವತಿ ಜಲಾಶಯದಿಂದ 5,300 ಕ್ಯೂಸೆಕ್ಸ್ ನೀರನ್ನು ಇಂದಿನಿಂದ ಹೊರ ಬಿಡಲಾಗುತ್ತಿದ್ದು, ಇದಕ್ಕೂ ಮುನ್ನ ಜಲಾಶಯಕ್ಕೆ ಗಂಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ಮತ್ತು ಸಕಲೇಶಪುರ ಭಾಗದಲ್ಲಿ ಮಳೆ ಹೆಚ್ಚಾದ ಕಾರಣ ಈ ಬಾರಿ ಹೇಮಾವತಿ ಮತ್ತೊಮ್ಮೆ ತುಂಬಿ ತುಳುಕಿದೆ. ಜಲಾಶಯ ತುಂಬಿದರೆ ರೈತರ ಬದುಕು ಹಸನಾಗುತ್ತದೆ. ಈ ಜಲಾಶಯವನ್ನು ನಂಬಿಕೊಂಡು ಹಾಸನ, ತುಮಕೂರು ಮತ್ತು ಮಂಡ್ಯ ಭಾಗದ ರೈತರು ಕೃಷಿ ಚಟುವಟಿಕೆಯನ್ನು ಆರಂಭಿಸುತ್ತಾರೆ. ಸತತ ಮೂರು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ. ಹಾಗಾಗಿ ಜಲಾಶಯದಿಂದ ಕಳೆದ 12 ದಿನಗಳಿಂದ ನೀರನ್ನು ಸತತವಾಗಿ ಹರಿಬಿಟ್ಟು ಗ್ರಾಮೀಣ ಭಾಗದ ಕೆರೆಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮಳೆಯಿಂದ ಹಾನಿಗೊಳಗಾದ ಬೆಳೆ ನಷ್ಟದ ಪರಿಹಾರ ನೀಡಲು ಸರ್ವೆ ಕಾರ್ಯ ನಡೆಯುತ್ತಿದೆ. ಸರ್ವೆ ಮುಗಿದ ಬಳಿಕ ಇದನ್ನು ಸರ್ಕಾರದ ಗಮನಕ್ಕೆ ತಂದು ತುರ್ತಾಗಿ ರೈತರಿಗೆ ಪರಿಹಾರ ನೀಡುವ ಕಾರ್ಯವನ್ನು ಮಾಡುತ್ತೇವೆ. ರೈತರು ನಮ್ಮ ದೇಶದ ಬೆನ್ನೆಲುಬು, ಅವರು ಚೆನ್ನಾಗಿದ್ದರೆ ಎಲ್ಲರೂ ಚೆನ್ನಾಗಿರುತ್ತೇವೆ. ಬೆಳೆ ನಷ್ಟದ ಸಮೀಕ್ಷೆ ಆದ ಬಳಿಕ ತಕ್ಷಣ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ರೈತರ ಖಾತೆಗಳಿಗೆ ಹಣ ಬಿಡುಗಡೆಗೊಳಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.